ಮಂಗಳವಾರ, ಏಪ್ರಿಲ್ 16ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 31ನೇ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ರೋಚಕವಾಗಿ ಗೆಲುವು ಸಾಧಿಸಿತು.
220ಕ್ಕೂ ಅಧಿಕ ಮೊತ್ತ ಗಳಿಸಿದ ಹೊರತಾಗಿಯೂ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅನಿರೀಕ್ಷಿತ ಸೋಲು ಎದುರಿಸಿತು. ಬೌಲಿಂಗ್ ವೇಳೆ ಮೈಮರೆತಿದ್ದರಿಂದ, ಈ ಕ್ಷಣವನ್ನು ಬಳಸಿಕೊಂಡ ರಾಜಸ್ಥಾನ್ ರಾಯಲ್ಸ್ ವಿಶೇಷವಾಗಿ, ಜೋಸ್ ಬಟ್ಲರ್ ತಮ್ಮ ತಂಡವನ್ನು ಕೊನೆಯ ಎಸೆತದಲ್ಲಿ ಗೆಲುವಿನ ಗಡಿ ಮುಟ್ಟಿಸಿದರು.

ಟೇಬಲ್-ಟಾಪರ್‌ಗಳ ಈ ಪಂದ್ಯದಲ್ಲಿ ಗೆದ್ದು ಬೀಗಿದ ರಾಜಸ್ಥಾನ್ ರಾಯಲ್ಸ್ ತಂಡ 7 ಪಂದ್ಯಗಳಲ್ಲಿ 6 ಪಂದ್ಯಗಳ ಗೆಲುವಿನೊಂದಿಗೆ ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಇನ್ನು ಕೆಕೆಆರ್ ತಂಡ 6 ಪಂದ್ಯಗಳಲ್ಲಿ 4 ಗೆಲುವು ಮತ್ತು 2 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸುನಿಲ್ ನರೈನ್ ಅವರ ಭರ್ಜರಿ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು.
224 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ ಅವರ ಮ್ಯಾಚ್ ವಿನ್ನಿಂಗ್ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ನಿಗದಿತ ಗುರಿ ತಲುಪಿತು. ಕೊನೆಯ ಎಸೆತದಲ್ಲಿ ಜೋಸ್ ಬಟ್ಲರ್ ಗೆಲುವಿನ ರನ್ ಬಾರಿಸಿದರು.

ಗಮನಾರ್ಹವಾಗಿ, ಜೋಸ್ ಬಟ್ಲರ್ ಅವರು ಐಪಿಎಲ್‌ನ 7ನೇ ಶತಕ ಬಾರಿಸುವ ಮೂಲಕ ಅತಿ ಹೆಚ್ಚು ಗೆಳಿಸಿದವರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಹಿಂದಿಕ್ಕಿ ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. ಕೊಹ್ಲಿ 8 ಶತಕ ಸಿಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಉತ್ತಮ ಆರಂಭ ನೀಡಲು ಪ್ರಯತ್ನಿಸಿತು. ಈ ಜೋಡಿ ಮೊದಲ ವಿಕೆಟ್‌ಗೆ 1.5 ಓವರ್‌ಗಳಲ್ಲಿ 22 ರನ್‌ಗಳ ಜೊತೆಯಾಟ ನೀಡಿತು. ಈ ವೇಳೆ 9 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 19 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಔಟಾದರು.
ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ 12 ರನ್, ರಿಯಾನ್ ಪರಾಗ್ 14 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 34 ರನ್, ಧ್ರುವ್ ಜುರೆಲ್ 2 ರನ್, ಆರ್ ಅಶ್ವಿನ್ 8 ರನ್, ರೋವ್ಮನ್ ಪೊವೆಲ್ 13 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಮೂಲಕ 26 ರನ್ ಗಳಿಸಿ ಔಟಾದರು.
ರಾಜಸ್ಥಾನ್ ರಾಯಲ್ಸ್ ಪಂದ್ಯ ವಿಜೇತ ಆರಂಭಿಕ ಆಟಗಾರ ಜೋಸ್ ಬಟ್ಲರ್ 60 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಮೇತ ಅಜೇಯ 107 ರನ್ ಬಾರಿಸಿದರು.
ಬೌಲಿಂಗ್‌ನಲ್ಲಿ ಕೆಕೆಆರ್ ತಂಡದ ಪರ ಹರ್ಷಿತ್ ರಾಣಾ, ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಕಬಳಿಸಿದರೆ, ಉಳಿದಂತೆ ವೈಭವ್ ಅರೋರಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್ ಆರಂಭಿಸಿದ ಸುನಿಲ್ ನರೈನ್ ಮತ್ತು ಫಿಲ್ ಸಾಲ್ಟ್ ಜೋಡಿ ಮೊದಲ ವಿಕೆಟ್‌ಗೆ 3.3 ಓವರ್‌ಗಳಲ್ಲಿ 21 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ 10 ರನ್ ಗಳಿಸಿದ್ದ ಫಿಲ್ ಸಾಲ್ಟ್ ಔಟಾದರು.
ಸ್ಫೋಟಕ ಆರಂಭಿಕ ಸುನಿಲ್ ನರೈನ್ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದರು. ಕೇವಲ 56 ಎಸೆತಗಳಲ್ಲಿ 13 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಮೇತ 109 ರನ್ ಬಾರಿಸಿದರು.
ನಂತರ ಬಂದ ಆಂಗ್‌ಕ್ರಿಶ್ ರಘುವಂಶಿ 18 ಎಸೆತಗಳಲ್ಲಿ 5 ಬೌಂಡರಿ ಸಮೇತ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ನಾಯಕ ಶ್ರೇಯಸ್ ಅಯ್ಯರ್ 7 ಎಸೆತಗಳಲ್ಲಿ 11 ರನ್, ಆಂಡ್ರೆ ರಸೆಲ್ 13 ರನ್, ಕೊನೆಯಲ್ಲಿ ರಿಂಕು ಸಿಂಗ್ ಅಜೇಯ 20 ರನ್, ವೆಂಕಟೇಶ್ ಅಯ್ಯರ್ 8 ರನ್ ಗಳಿಸಿ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು.
ಬೌಲಿಂಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅವೇಶ್ ಖಾನ್ 4 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರೆ, ಕುಲದೀಪ ಸೇನ್ 4 ಓವರ್‌ಗಳಲ್ಲಿ 46 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಟ್ರೆಂಟ್ ಬೌಲ್ಟ್ ಮತ್ತು ಯುಜ್ವೇಂದ್ರ ಚಹಾಲ್ ತಲಾ ಒಂದು ವಿಕೆಟ್ ಪಡೆದರು.