KKR vs SRH: ಸನ್ ವಿರುದ್ಧ ಆರ್ಭಟಿಸಿದ ಕೆಕೆಆರ್
ಹೈದರಾಬಾದ್: ಸಂಘಟಿತ ಆಟದ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 45ನೇ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡವನ್ನು ಮಣಿಸಿ ಅಬ್ಬರಿಸಿತು. ಈ ಗೆಲುವಿನ ಮೂಲಕ ಕೆಕೆಆರ್ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ. ಕೆಕೆಆರ್ ಆಡಿದ 9 ಪಂದ್ಯಗಳಲ್ಲಿ 3 ಜಯ, 5 ಸೋಲು ಹಾಗೂ 1 ಪಂದ್ಯ ರದ್ದಾಗಿದ್ದು 7 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.
ಮಹತ್ವದ ಪಂದ್ಯದಲ್ಲಿ ಟಾಸ್ ಎಸ್‌ಆರ್‌ಎಚ್ ಪಾಲಾಯಿತು. ಟಾಸ್ ಗೆದ್ದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ತಮ್ಮದಾಗಿಸಿಕೊಂಡರು. ಆರಂಭಿಕ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಜೋಡಿ ಮೊದಲ ವಿಕೆಟ್‌ಗೆ 44 ರನ್ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ 15 ರನ್ ಬಾರಿಸಿದ್ದ ಅಭಿಷೇಕ್ ಶರ್ಮಾ ಕಾರ್ತಿಕ್ ತ್ಯಾಗಿ ಅವರಿಗೆ ವಿಕೆಟ್ ಒಪ್ಪಿಸಿದರು.

ಟ್ರಾವಿಸ್ ಹೆಡ್ 61 ರನ್
ಎರಡನೇ ವಿಕೆಟ್‌ಗೆ ಟ್ರಾವಿಸ್ ಹೆಡ್ ಹಾಗೂ ಭರವಸೆಯ ಆಟಗರ ಇಶಾನ್ ಕಿಶನ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಕೆಕೆಆರ್ ವಿಫಲವಾಯಿತು. ಈ ಜೋಡಿ ಎರಡನೇ ವಿಕೆಟ್‌ಗೆ 32 ಎಸೆತಗಳಲ್ಲಿ 61 ರನ್ ಸೇರಿಸಿತು. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 28 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 61 ರನ್ ಬಾರಿಸಿದರು. ಇನ್ನು ಇಶಾನ್ ಕಿಶನ್ ಸಹ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 42 ರನ್ ಸಿಡಿಸಿ ಔಟ್ ಆದರು.
ಹೆನ್ರಿಕ್ ಕ್ಲಾಸೆನ್ 11, ಪ್ಯಾಟ್ ಕಮಿನ್ಸ್ 10 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಎರಡಂಕಿ ಮೊತ್ತ ದಾಟಲಿಲ್ಲ. ಅಂತಿಮವಾಗಿ ಎಸ್‌ಆರ್‌ಎಚ್ 19 ಓವರ್‌ಗಳಲ್ಲಿ 165 ರನ್‌ಗೆ ಆಲೌಟ್ ಆಯಿತು. ಕೆಕೆಆರ್ ತಂಡದ ಪರ ವರುಣ್ ಚಕ್ರವರ್ತಿ 36 ರನ್‌ಗೆ 3 ವಿಕೆಟ್ ಪಡೆದರು. ವೈಭವ್ ಆರೋರಾ, ಸುನಿಲ್ ನರೈನ್ ತಲಾ 2 ವಿಕೆಟ್ ಕಬಳಿಸಿದರು.
ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ತಂಡದ ಪರ ಆರಂಭಿಕರಾದ ಅಜಿಂಕ್ಯ ರಹಾನೆ ಹಾಗೂ ಫಿನ್ ಅಲೆನ್ ಜೋಡಿ 3.6 ಓವರ್‌ಗಳಲ್ಲಿ 49 ರನ್ ಸೇರಿಸಿತು. ಫಿನ್ ಅಲೆನ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 29 ರನ್ ಸಿಡಿಸಿದರು.
ಅಂಗ್‌ಕ್ರಿಷ್ ಅರ್ಧಶತಕ
ಎರಡನೇ ವಿಕೆಟ್‌ಗೆ ನಾಯಕ ಅಜಿಂಕ್ಯ ರಹಾನೆ ಅವರನ್ನು ಸೇರಿಕೊಂಡು ಯುವ ಆಟಗಾರ ಅಂಗ್‌ಕ್ರಿಷ್ ರಘುವಂಶಿ ಅವರು ಆಕರ್ಷಕ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಎಸ್‌ಆರ್‌ಎಚ್ ಬೌಲರ್‌ಗಳು ವಿಫಲರಾದರು. ಈ ಜೋಡಿ 66 ಎಸೆತಗಳಲ್ಲಿ 84 ರನ್ ಕಾಣಿಕೆ ನೀಡಿತು. ಈ ಹಂತದಲ್ಲಿ ನಾಯಕ ಅಜಿಂಕ್ಯ ರಹಾನೆ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 43 ರನ್ ಬಾರಿಸಿ ಔಟ್ ಆದರು. ಭರವಸೆಯ ಬ್ಯಾಟರ್ ಅಂಗ್‌ಕ್ರಿಷ್ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 59 ರನ್ ಬಾರಿಸಿ ಮಿಂಚಿದರು. ಫಿನಿಷರ್ ರಿಂಕು ಸಿಂಗ್ 2 ಬೌಂಡರಿ, 1 ಸಿಕ್ಸರ್ ಒಳಗೊಂಡಂತೆ ಅಜೇಯ 22 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಕೆಕೆಆರ್ 18.2 ಓವರ್‌ಗಳಲ್ಲಿ 3 ವಿಕೆಟ್‌ಗೆ 169 ರನ್ ಸೇರಿಸಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications