ಭಾರತ ಹಾಗೂ ಇಂಗ್ಲೆಂಡ್ ನಡುವಣ ಕೊನೆಯ ಟೆಸ್ಟ್ ಪಂದ್ಯ ಓವಲ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತ ಟೀಮ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆಯಿತು. ಕೊನೆಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆದರೆ ಭಾರತ ತಂಡದ ಸ್ಟಾರ್ ಆಟಗಾರರು ದೊಡ್ಡ ಸಾಧನೆ ಮಾಡಿದ್ದಾರೆ. ಶುಭಮನ್ ಗಿಲ್ 21 ರನ್ ಬಾರಿಸುತ್ತಿದ್ದಂತೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಶುಭಮನ್ ಗಿಲ್ ಅವರಂತೆ ಕನ್ನಡಿಗ ಕೆಎಲ್ ರಾಹುಲ್ ಸಹ ಈ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ತಂಡ ಇವರಿಗೆ ನೀಡಿದ್ದ ರೋಲ್ ಸಖತ್ ಆಗಿ ನಿಭಾಯಿಸಿರುವ ರಾಹುಲ್ ಎಲ್ಲರ ಗಮನ ಸೆಳೆದರು. ಈ ಸರಣಿಯುದ್ದಕ್ಕೂ ಆರಂಭಿಕರಾಗಿ ಕಾಣಿಸಿಕೊಂಡ ರಾಹುಲ್, ತಮ್ಮ ಕ್ಲಾಸಿಕ್ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದರು. ಒಬ್ಬ ಟೆಸ್ಟ್ ಸ್ಪೆಷಲಿಸ್ಟ್ ರೀತಿ ಬ್ಯಾಟ್ ಮಾಡಿದ ರಾಹುಲ್, ಸರಣಿಯಲ್ಲಿ ಹಲವು ವೇಳೆ ತಂಡಕ್ಕೆ ಆಧಾರವಾಗಿದ್ದಾರೆ.

ಕೆಎಲ್ ರಾಹುಲ್ ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನ 14 ರನ್ ಬಾರಿಸಿ ಬೋಲ್ಡ್ ಆದರು. ಆಂಡರ್ಸನ್, ತೆಂಡುಲ್ಕರ್ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಇವರಿಗೆ ಎರಡನೇ ಸ್ಥಾನ. ರಾಹುಲ್ ಈ ಸರಣಿಯಲ್ಲಿ 58.33ರ ಸರಾಸರಿಯಲ್ಲಿ 525 ರನ್ ಕಲೆ ಹಾಕಿದ್ದಾರೆ. ಅಲ್ಲದೆ 2 ಶತಕ ಹಾಗೂ 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನ ಒಂದೇ ಸರಣಿಯಲ್ಲಿ 500ಕ್ಕೂ ಹೆಚ್ಚು ರನ್ ಇದೇ ಮೊದಲ ಬಾರಿಸಿದ ಹಿರಿಮೆ ಹೊಂದಿದ್ದಾರೆ.
ಕೆಎಲ್ ರಾಹುಲ್ ಈ ಸರಣಿಯಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ರಾಹುಲ್ ಈ ಸರಣಿಯಲ್ಲಿ 1038 ಎದುರಿಸುವ ಮೂಲಕ, ಇದೇ ಮೊದಲ ಬಾರಿಗೆ ಒಂದು ಟೆಸ್ಟ್ ಸರಣಿಯಲ್ಲಿ ಸಾವಿರಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಶುಭಮನ್ ಗಿಲ್ ಸಹ 1141 ಎಸೆತಗಳನ್ನು ಎದುರಿಸಿದ್ದಾರೆ.
ಕೆಎಲ್ ರಾಹುಲ್ ಅವರಿಗೆ ಈ ಸರಣಿಯಲ್ಲಿ ಇನ್ನೊಂದು ಇನಿಂಗ್ಸ್ ಆಡುವ ಅವಕಾಶ ಸಿಗಲಿದೆ. ಈ ವೇಳೆ ಇವರು ಸುನಿಲ್ ಗವಾಸ್ಕರ್ ಅವರ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಇಂಗ್ಲೆಂಡ್‌ನಲ್ಲಿ ಭಾರತೀಯ ಓಪನರ್ ಆಗಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆ ಗವಾಸ್ಕರ್ ಅವರಿಗೆ ಸಲ್ಲುತ್ತದೆ. ಇವರು ಆಡಿದ 15 ಟೆಸ್ಟ್ ಪಂದ್ಯಗಳಲ್ಲಿ 1152 ರನ್ ಗಳಿಸಿದ್ದಾರೆ. ರಾಹುಲ್ ಇದುವರೆಗೆ 13 ಟೆಸ್ಟ್ ಪಂದ್ಯಗಳಲ್ಲಿ 1122 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಎರಡನೇ ಇನಿಂಗ್ಸ್‌ನಲ್ಲಿ 31 ರನ್ ಬಾರಿಸುವಲ್ಲಿ ಯಶಸ್ವಿಯಾದರೆ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ.