ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಕೊಲಂಬೊದಲ್ಲಿ ಭಾನುವಾರ ನಡೆಯಲಿದೆ. ಅದಕ್ಕೂ ಮುನ್ನ ಲಕ್ನೋದಲ್ಲಿ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯ ಆರಂಭವಾಗಿವೆ. ಈ ಪಂದ್ಯದಲ್ಲಿ ಉತ್ತರಾಖಂಡ ಹಾಗೂ ಕರ್ನಾಟಕ ತಂಡಗಳು ಕಾದಾಟ ನಡೆಸಿದವು. ಟಾಸ್ ಗೆದ್ದ ಉತ್ತರಾಖಂಡ ಮೊದಲು ಫೀಲ್ಡ್ ಮಾಡಲು ನಿರ್ಧರಿಸಿತು. ತಂಡದ ಅನುಭವಿ ಬ್ಯಾಟರ್‌ಗಳಾದ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್ ಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಲು ಸಫಲರಾದರು.
ಕರ್ನಾಟಕದ ಅನುಭವಿ ಆರಂಭಿಕ ಮಯಾಂಕ್ ಅಗರ್‌ವಾಲ್ ಹಾಗೂ ಕೆಎಲ್ ರಾಹುಲ್ ಜೋಡಿ ಉತ್ತಮ ಆರಂಭವನ್ನು ನೀಡುವಲ್ಲಿ ವಿಫಲವಾಯಿತು. ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಮಯಾಂಕ್ ಅಗರ್‌ವಾಲ್ ಕೇವಲ 5 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಕೇವಲ 18 ರನ್‌ಗಳಿಗೆ ಕರ್ನಾಟಕ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ತಂಡ ಸಂಕಷ್ಟದಲ್ಲಿದ್ದಾಗ ಮುಂದು ನಿಂತು ಆಪತ್ಭಾಂದವ ರೀತಿ ಬ್ಯಾಟ್ ಮಾಡುವ ಕೆಎಲ್ ರಾಹುಲ್ ತಮ್ಮ ಅನುಭವದ ಲಾಭ ಪಡೆದು ಬ್ಯಾಟ್ ಮಾಡಿದರು. ಅಲ್ಲದೆ ಒತ್ತಡದಲ್ಲಿದ್ದ ತಂಡಕ್ಕೆ ಆಧಾರವಾದರು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದ ಇವರು, ಲಕ್ನೋದಲ್ಲಿ ಕ್ಲಾಸ್ ಇನಿಂಗ್ಸ್ ಕಟ್ಟಿದರು. ನಾಯಕ ದೇವದತ್ ಪಡಿಕ್ಕಲ್ ಜೋಡಿ ರಾಹುಲ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡಕ್ಕೆ ಶತಕದ ಜೊತೆಯಾಟವನ್ನು ನೀಡಿ, ಆರ್ಭಟಿಸಿತು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಮಾಡಿದ ಕನ್ನಡಿಗ ರಾಹುಲ್, ಸೆಮಿಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಬ್ಬರಿಸಿದರು. ರಾಹುಲ್ ಉತ್ತರಾಖಂಡ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಮಿಂಚಿದರು.ಇವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 26ನೇ ಶತಕ ಬಾರಿಸಿ ಮಿಂಚಿದರು. ಅಲ್ಲದೆ ತಂಡ ದೊಡ್ಡ ಮೊತ್ತವನ್ನು ಸೇರಿಸುವತ್ತ ಚಿತ್ತ ನೆಡುವಂತೆ ಮಾಡಿದರು. ಆರಂಭಿಕ ಕೆಎಲ್ ರಾಹುಲ್ 11 ಬೌಂಡರಿ, 5 ಸಿಕ್ಸರ್ ನೆರವಿನಿಂದ 141 ರನ್ ಸಿಡಿಸಿದರು.
18 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ದೇವದತ್ ಪಡಿಕ್ಕಲ್ ಹಾಗೂ ರಾಹುಲ್ ತಂಡಕ್ಕೆ ಆಧಾರವಾಯಿತು. ಈ ವೇಳೆ ದೇವದತ್ ಆರಂಭದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಇವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9ನೇ ಶತಕ ಬಾರಿಸಿ ಮಿಂಚಿದರು. ದೇವದತ್ ಪಡಿಕ್ಕಲ್ ಅವರು 16 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 148 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 355 ರನ್ ಕಲೆ ಹಾಕಿದೆ. ಇವರು ಭರವಸೆಯ ಆಟಗಾರ ಕರುಣ್ ನಾಯರ್ ಅವರೊಂದಿಗೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಬ್ಬರು ಸೋಮವಾರ ಮೊದಲಾವಧಿಯಲ್ಲಿ ಎಚ್ಚರಿಕೆಯ ಆಟವಾಡಿ ತಂಡಕ್ಕೆ ನೆರವಾಗಬೇಕಿದೆ. ಅಂದಾಗ ಮಾತ್ರ ಕರ್ನಾಟಕ ತಂಡ ದೊಡ್ಡ ಮೊತ್ತ ಕಲೆ ಹಾಕುವ ಕನಸು ನನಸಾಗುತ್ತದೆ.