ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ದುಬೈನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸಂಘಟಿತ ಆಟ ಎಲ್ಲರ ಚಿತ್ತ ಕದ್ದಿದೆ. ಆದರೆ ಆ ಒಬ್ಬ ಪ್ಲೇಯರ್‌ನ ತಾಳ್ಮೆ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಒತ್ತಡದ ಸನ್ನಿವೇಶದಲ್ಲಿ ಆಡುವ ಧಾಟಿಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಆತ ಕನ್ನಡಿಗ ಎನ್ನುವುದೇ ಹೆಮ್ಮೆಯ ವಿಷಯ.
ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸಿದಾಗ ಈ ಕನ್ನಡಿಗನಿಗೂ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಈ ವೇಳೆ ಇವರಿಗೆ ಆಡುವ ಅವಕಾಶ ಲಭಿಸುತ್ತದ್ದಾ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಈ ಸವಾಲುಗಳನ್ನು ಮೆಟ್ಟಿನಿಂತು ಸಿಕ್ಕ ಅವಕಾಶವನ್ನು ಇವರು ಸಮರ್ಥವಾಗಿ ಉಪಯೋಗಿಸಿಕೊಂಡಿದ್ದಾರೆ. ಅಲ್ಲದೆ ವಿಕೆಟ್ ಹಿಂದೆಯೂ ಅಮೋಘ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವಲ್ಲಿ ಕನ್ನಡಿಗ ಕೆಎಲ್ ರಾಹುಲ್ ಪಾತ್ರ ದೊಡ್ಡದು.

ಕೆಎಲ್ ರಾಹುಲ್ ತಂಡಕ್ಕೆ ಆಯ್ಕೆ ಆದಾಗ ಇವರು ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ ಎಂಬ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಈ ಎಲ್ಲ ಪ್ರಶ್ನೆಗಳಿಗೆ ಇವರು ತಮ್ಮ ಬ್ಯಾಟ್‌ನಿಂದ ಉತ್ತರ ನೀಡಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ನೀಡಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವ ರಾಹುಲ್ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಕೆಎಲ್ ರಾಹುಲ್ ಟೀಮ್ ಇಂಡಿಯಾದ ಹೊಸ ಫಿನಿಷರ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಒತ್ತಡದಲ್ಲಿದ್ದ ಇವರ ಬ್ಯಾಟಿಂಗ್‌ನಲ್ಲಿ ಅರಳಿದ ಅಮೋಘ ಇನಿಂಗ್ಸ್.
ಒತ್ತಡವನ್ನು ಹೇಗೆ ಮೆಟ್ಟಿನಿಲ್ಲಬೇಕು ಎಂಬುದನ್ನು ಚೆನ್ನಾಗಿ ಅರಿತು ಕೊಂಡಿರುವ ರಾಹುಲ್ ನಿಜಕ್ಕೂ ತ್ಯಾಗರಾಜ. ಸಾಮಾನ್ಯವಾಗಿ ರಾಹುಲ್ ಆರಂಭಿಕರಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಆರಂಭಿಕ ಸ್ಲಾಟ್‌ಗಳು ಫುಲ್ ಆದಾಗ, ನಾಲ್ಕನೇ ಹಾಗೂ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಆರಂಭಿಸಿದರು. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ರಾಹುಲ್ ಹೆಚ್ಚಾಗಿ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಬ್ಬರಿಸಿದ್ದಾರೆ. ಇವರಿಗಿಂತಲೂ ಮೇಲುಗಡೆ ಅಕ್ಷರ್ ಪಟೇಲ್ ಬ್ಯಾಟ್ ಮಾಡಿ ತಂಡದ ಬ್ಯಾಟಿಂಗ್ ಕಾಂಬಿನೇಷನ್‌ಗೆ ಸಹಾಯ ಮಾಡಿದರು. ಇದಕ್ಕೂ ತಲೆ ಕೆಡಿಸಿಕೊಳ್ಳದ ರಾಹುಲ್ ತನ್ನಗೆ ಸಿಕ್ಕಿದ್ದೇ ಪಂಚಾಮೃತ ಎಂಬಂತೆ ಮುನ್ನಡೆದರು.

ಕೆಎಲ್ ರಾಹುಲ್ ಬ್ಯಾಟಿಂಗ್ ಎಂತಹದ್ದು ಎಂಬುದಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳೇ ಉದಾಹರಣೆ. ಈ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಒತ್ತಡದಲ್ಲಿದ್ದಾಗ ರಾಹುಲ್ ಬ್ಯಾಟ್ ಮಾಡಲು ಕ್ರೀಸ್‌ಗೆ ಬಂದರು. ಆಗ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಿ ತಂಡದ ಗೆಲುವಿನಲ್ಲಿ ಮಿಂಚಿದರು. ಅವಶ್ಯಕತೆ ಇದ್ದಾಗ ದೊಡ್ಡ ಹೊಡೆತವನ್ನು ಪ್ರಯೋಗಿಸಿ ಮುನ್ನಗಿದ್ರು. ಇಲ್ಲದೆ ಇದ್ದಾಗ ಸಿಂಗಲ್ ಹಾಗೂ ಡಬಲ್‌ನಲ್ಲಿ ಸ್ಕೋರ್ ಬೋರ್ಡ್ ಬ್ಯೂಸಿ ಇಟ್ಟಿದ್ದರು. ಆದರೆ ಕೆಟ್ಟ ಎಸೆತ ಸಿಕ್ಕರೆ ಅಭಿಮಾನಿಗಳ ಗ್ಯಾಲರಿಗೆ ಚೆಂಡನ್ನು ಅಟ್ಟುವಲ್ಲಿ ಸಫಲರಾಗುತ್ತಿದ್ದರು. ಅಲ್ಲದೆ ತಂಡಕ್ಕೆ ಬೇಕಿದ್ದ ರೋಲ್ ಪ್ಲೇ ಮಾಡಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇಲ್ಲದ ಶಾಟ್ ಹೊಡೆದು ಔಟ್ ಆದಾಗ, ರಾಹುಲ್ ತಮ್ಮ ಮುಖ ಭಾವದಿಂದಲೇ ನೀವು ಏಕೆ ಇಂತಹ ಶಾಟ್ ಪ್ರಯೋಗಿಸಿದ್ರಿ, ನಾನು ಹೊಡೆಯುತ್ತಿದ್ದೆ ಎಂದು ಹೇಳಿದ್ರು. ಇದೇ ರೀತಿಯ ಭಾವ ಫೈನಲ್‌ನಲ್ಲೂ ಕಂಡು ಬಂದಿತು. ಅಕ್ಷರ್ ಪಟೇಲ್ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದಾಗ ರಾಹುಲ್ ಇದೇ ರೀತಿ ಭಾವನೆ ವ್ಯಕ್ತ ಪಡಿಸಿದರು. ಆದರೆ ಧೃತಿ ಗೆಡದ ರಾಹುಲ್ ಫೈನಲ್ ಪಂದ್ಯದಲ್ಲಿ ಆಂಕರ್ ರೋಲ್ ಪ್ಲೇ ಮಾಡಿ ಎಲ್ಲರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದರು.
ಕೆಎಲ್ ರಾಹುಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ 5 ಪಂದ್ಯಗಳ 4 ಇನಿಂಗ್ಸ್‌ಗಳಲ್ಲಿ ಕೇವಲ ಒಮ್ಮೆ ಮಾತ್ರ ಔಟ್ ಆಗಿದ್ದಾರೆ. ಇವರು ಆಡಿದ 5 ಪಂದ್ಯಗಳ 4 ಇನಿಂಗ್ಸ್‌ನಲ್ಲಿ 140 ರನ್ ಸಿಡಿಸಿದ್ದಾರೆ. ಇವರು ಅರ್ಧಶತಕ ಬಾರಿಸುವಲ್ಲಿ ವಿಫಲರಾಗಿರಬಹುದು. ಆದರೆ ಇವರ ಈ ಚಿಕ್ಕ ಚಿಕ್ಕ ಇನಿಂಗ್ಸ್ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ.