ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಕರ್ನಾಟಕದ ಕೆಎಲ್ ರಾಹುಲ್ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ರಾಹುಲ್, ಎರಡನೇ ಟೆಸ್ಟ್‌ನಲ್ಲೂ ಇದೇ ಸ್ಥಿರ ಬ್ಯಾಟಿಂಗ್ ಪ್ರದರ್ಶಿಸುವ ಇರಾದೆಯನ್ನು ಹೊಂದಿದ್ದಾರೆ. ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಬಿಗ್ ಇನಿಂಗ್ಸ್ ಕಟ್ಟಿ ಮತ್ತೊಂದು ದಾಖಲೆಯನ್ನು ಬರೆಯುವ ಕನಸು ರಾಹುಲ್ ಅವರದ್ದಾಗಿದೆ.
ಇಂಗ್ಲೆಂಡ್ ಪ್ರವಾಸಕ್ಕಿಂತಲೂ ಮುಂಚೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು. ಆಗ ರಾಹುಲ್ ಓಪನರ್ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಇವರು ಈ ಸ್ಥಾನಕ್ಕೆ ನ್ಯಾಯ ಒದಗಿಸಿದ ಆಟಗಾರ. ಇಂಗ್ಲೆಂಡ್ ಪ್ರವಾಸದಲ್ಲಿ ರಾಹುಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಅಲ್ಲದೆ ತಮ್ಮ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಮೊದಲ ಬಾರಿಗೆ ಸರಣಿಯೊಂದರಲ್ಲಿ 500ಕ್ಕೂ ಹೆಚ್ಚು ರನ್ ಬಾರಿಸಿದ ದಾಖಲೆ ಹೊಂದಿದ್ದರು. ಈಗ ಜೇಟ್ಲಿ ಮೈದಾನದಲ್ಲಿ ರಾಹುಲ್ ಬಿಗ್ ಇನಿಂಗ್ಸ್ ಕಟ್ಟಿದರೆ ಮತ್ತೊಂದು ಮೈಲುಗಲ್ಲು ತಲುಪಲಿದ್ದಾರೆ.

ಅಹಮದಾಬಾದ್‌ನಲ್ಲಿ ನೀಡಿದ ಪ್ರದರ್ಶನವನ್ನೇ ರಾಹುಲ್, ಎರಡನೇ ಟೆಸ್ಟ್ ಪಂದ್ಯದಲ್ಲೂ ನೀಡಿದ್ದೇ ಆದಲ್ಲಿ ದಾಖಲೆ ಬರೆಯಲಿದ್ದಾರೆ. ಇವರು 111 ರನ್‌ಗಳನ್ನು ಬಾರಿಸಿದ್ದೇ ಆದಲ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ 4 ಸಾವಿರ ರನ್‌ಗಳನ್ನು ಮಾಡಿದ ಸಾಧನೆ ಮಾಡುತ್ತಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮುರಳಿ ವಿಜಯ್ ಅವರ ದಾಖಲೆಯನ್ನು ಸಹ ಅಳಿಸಿ ಹಾಕಲಿದ್ದಾರೆ. ಟೀಮ್ ಇಂಡಿಯಾದ ಮಾಜಿ ಓಪನ್ ಮುರಳಿ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 3982 ರನ್ ಸಿಡಿಸಿದ್ದಾರೆ.
ಭಾರತದ ಪರ 2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ರಾಹುಲ್ ಭರವಸೆ ಮೂಡಿಸಿರುವ ಆಟಗಾರ. ಸದ್ಯ ಇವರು ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ. ರಾಹುಲ್ ಭಾರತದ ಪರ ಆಡಿದ 64 ಟೆಸ್ಟ್ ಪಂದ್ಯಗಳಲ್ಲಿ 36ರ ಸರಾಸರಿಯಲ್ಲಿ 3889 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 11 ಶತಕ ಹಾಗೂ 19 ಅರ್ಧಶತಕಗಳು ಸೇರಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರಾಹುಲ್ 199 ರನ್ ಬಾರಿಸಿದ್ದು ಬೆಸ್ಟ್ ಸ್ಕೋರ್ ಆಗಿದೆ.

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಸಹ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಇನ್ನು ಎರಡನೇ ಟೆಸ್ಟ್‌ನಲ್ಲಿ 10 ರನ್ ಬಾರಿಸುತ್ತಿದ್ದಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ 4 ಸಾವಿರ ರನ್ ಪೂರೈಸಲಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಕೆಲವೇ ಕೆಲವು ಆಟಗಾರರ ಎಲೈಟ್ ಕ್ಲಬ್‌ಗೆ ಎಂಟ್ರಿ ನೀಡಲಿದ್ದಾರೆ. ಟೆಸ್ಟ್‌ನಲ್ಲಿ 4 ಸಾವಿರ ರನ್ ಹಾಗೂ 300 ವಿಕೆಟ್ ಪಡೆದ ಸಾಧನೆಯನ್ನು ಮಾಡುವ ಕನಸಿನಲ್ಲಿ ಜಡೇಜಾ ಇದ್ದಾರೆ. ಇನ್ನು ಜೇಟ್ಲಿ ಮೈದಾನದಲ್ಲಿ ಈಗಾಗಲೇ ತಮ್ಮ ಸ್ಪಿನ್ ಪಿರ್ಕಿ ಪ್ರದರ್ಶಿಸಿರುವ ಜಡ್ಡು ಅಬ್ಬರಿಸಲು ಸಜ್ಜಾಗಿದ್ದಾರೆ.