ಟೀಮ್ ಇಂಡಿಯಾದ ಸ್ಟಾರ್ ಭರವಸೆಯ ಆಟಗಾರ ಕೆಎಲ್ ರಾಹುಲ್ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾದ ಪರ ಅತ್ಯಧಿಕ ರನ್ ಬಾರಿಸಿರುವ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ಈ ವೇಳೆ ಇವರ ಸ್ಥಿರ ಪ್ರದರ್ಶನ ಕಂಡು ಮ್ಯಾನೇಜ್ಮೆಂಟ್ ಸಹ ಫುಲ್ ಖುಷ್ ಆಗಿದೆ. ಈಗ ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮತ್ತೊಂದು ದೊಡ್ಡ ಸಾಧನೆ ಮಾಡುವ ಹೊಸ್ತಿಲಲ್ಲಿ ನಿಂತಿದ್ದಾರೆ. ರಾಹುಲ್ ಬರೆಯಲಿರುವ ದಾಖಲೆಯ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರಸಕ್ತ ಬಾರ್ಡರ್ ಗವಾಸ್ಕರ್ ಸರಣಿಯ ಭಾರತೀಯ ಬ್ಯಾಟರ್‌ಗಳಿಗೆ ಕಠಿಣ ಪರೀಕ್ಷೆಯನ್ನು ಒಡ್ಡಿದೆ. ಆದರೆ ಈ ಸರಣಿಯಲ್ಲಿ ನೆಲಕಚ್ಚಿ ಬ್ಯಾಟ್ ಮಾಡಿರುವ ಭಾರತೀಯ ಆಟಗಾರರಲ್ಲಿ ರಾಹುಲ್‌ಗೆ ಮೊದಲ ಸ್ಥಾನ. 32 ವರ್ಷದ ರಾಹುಲ್ ಸರಣಿಯಲ್ಲಿ ಅತ್ಯಧಿಕ ರನ್ ಸ್ಕೋರ್ ಮಾಡಿದ ಎರಡನೇ ಆಟಗಾರ. ಇವರು ಈ ಸರಣಿಯಲ್ಲಿ 47ರ ಸರಾಸರಿಯಲ್ಲ 235 ರನ್ ಕಲೆ ಹಾಕಿದ್ದಾರೆ. ಈ ಪ್ರದರ್ಶನದ ಬಲದಿಂದಲೇ ಇವರನ್ನು ಟೀಮ್ ಇಂಡಿಯಾದ ಪ್ರಮುಖ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

ಡಿಸೆಂಬರ್ 26 ರಂದು ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐತಿಹಾಸಿಕ ಪಂದ್ಯ ರಾಹುಲ್ ಅವರಿಗೆ ಮಹತ್ವದಾಗಿದೆ. ಈ ಪಂದ್ಯ ರಾಹುಲ್ ವೃತ್ತಿ ಬದುಕಿನಲ್ಲೂ ಮಹತ್ವ ಪಡೆದಿದೆ. ಈಗಾಗಲೇ ರಾಹುಲ್ ಎರಡು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಈ ಎರಡೂ ಟೆಸ್ಟ್ ಪಂದ್ಯಗಳು ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿವೆ. ಇದರಲ್ಲಿ ಮೊದಲನೇಯದ್ದು 2021ರಲ್ಲಿ ಆದರೆ, ಮತ್ತೊಂದು ಟೆಸ್ಟ್ 2023ರಲ್ಲಿ ಆಡಲಾಗಿದೆ. ರಾಹುಲ್ ಈ ಎರಡೂ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಶತಕ ಬಾರಿಸಿದ್ದಾರೆ.

ರಾಹುಲ್ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವಲ್ಲಿ ಯಶಸ್ವಿ ಆದರೆ, ಮತ್ತೊಂದು ದಾಖಲೆ ಬರೆಯಲಿದ್ದಾರೆ. ಇವರು ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಮೂರು ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹಿರಿಮೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.
ಈ ಸಾಧನೆ ಮಾಡಿದಲ್ಲಿ ಸ್ಟಾರ್ ಆಟಗಾರರ ಸಾಧನೆಯನ್ನು ರಾಹುಲ್ ಹಿಂದಿಕ್ಕಬಹುದು. ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ರಾಹುಲ್ ತಲಾ ಎರಡು ಶತಕ ಹೊಂದಿದ್ದಾರೆ.
ಮೆಲ್ಬೋರ್ನ್‌ನ ಟೆಸ್ಟ್ ಪಂದ್ಯ ರಾಹುಲ್ ಅವರಿಗೆ ಸ್ಮರಣೀಯ. ಇದೇ ಅಂಗಳದಲ್ಲಿ ಹತ್ತು ವರ್ಷದ ಹಿಂದೆ ರಾಹುಲ್ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದರು. ಇವರು ಪದಾರ್ಪಣೆ ಪಂದ್ಯದಲ್ಲಿ ಮೂರು ಹಾಗೂ ಒಂದು ರನ್ ಮಾತ್ರ ಸಿಡಿಸಿದ್ದರು. ಸಿಡ್ನಿಯಲ್ಲಿ ನಡೆದ ನಂತರದ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಅಮೋಘ ಪ್ರದರ್ಶನ ನೀಡಿ ಶತಕ ಬಾರಿಸಿದರು. ಈ ಮೂಲಕ ಭರವಸೆ ಮೂಡಿಸಿದ್ದಾರೆ.