ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಏಕದಿನ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಕೆಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಬ್ಬರಿಸಿದರು. ಈ ಮೂಲಕ ಹಲವು ವರ್ಷಗಳಿಂದ ಟೀಮ್ ಮ್ಯಾನೇಜ್ಮೆಂಟ್ ಹುಡುಕುತ್ತಿದ್ದ ಮಧ್ಯಮ ಕ್ರಮಾಂಕದ ಹುಡುಕಾಟ ನಿಂತಂತಾಗಿದೆ. ಒತ್ತಡವನ್ನು ಮೆಟ್ಟಿನಿಂತ ಕನ್ನಡಿಗ ಕೆಎಲ್ ರಾಹುಲ್ ಅಬ್ಬರಿಸಿದರು. ಇವರು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಜೇಯ 112 ರನ್‌ಗಳ ಇನಿಂಗ್ಸ್ ಕಟ್ಟಿದರು. ಈ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾದರು. ಈ ಕ್ಲಾಸ್ ಆಟವನ್ನು ಕಂಡು ಸುನಿಲ್ ಗವಾಸ್ಕರ್ ಅವರು ರಾಹುಲ್ ಅವರನ್ನು ಆಧುನಿಕ ಯುಗದ ಆಪತ್ಬಾಂಧವ ಎಂದು ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ಸುನಿಲ್ ಗವಾಸ್ಕರ್ ಅವರು, ರಾಹುಲ್ ಅವರ ಆಟವನ್ನು ಕೊಂಡಾಡಿದ್ದಾರೆ. ರಾಹುಲ್ ದ್ರಾವಿಡ್ ಯಾವ ರೀತಿ ಸಂಕಷ್ಟದಲ್ಲಿ ತಂಡಕ್ಕೆ ನೆರವಾಗುತ್ತಿದ್ದರೋ ಅದೇ ರೀತಿ ರಾಹುಲ್ ಸಹ ತಂಡಕ್ಕೆ ಆಧಾರವಾಗಿದ್ದಾರೆ. ಕೆಎಲ್ ರಾಹುಲ್ ಅವರ ಆಟವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅವರ ಬ್ಯಾಟಿಂಗ್‌ನಲ್ಲಿ ಟೆಕ್ನಿಕ್, ಟೆಂಪರಮೆಂಟ್, ಯಾವ ಚೆಂಡಿಗೆ ಹೇಗೆ ದಂಡಿಸಬೇಕು ಎನ್ನುವುದು ರಾಹುಲ್ ಅವರಿಗೆ ಚೆನ್ನಾಗಿ ತಿಳಿದಿದೆ.

ಕರ್ನಾಟಕದವರೇ ಆದ ರಾಹುಲ್ ದ್ರಾವಿಡ್ ಅವರು ಹಿಂದೆ ತಂಡ ಸಂಕಷ್ಟದಲ್ಲಿದ್ದಾಗ ಹೇಗೆ ಆಸರೆಯಾಗುತ್ತಿದ್ದರೋ, ಈಗ ಕೆ.ಎಲ್. ರಾಹುಲ್ ಅದೇ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಂಡ ತೊಂದರೆಯಲ್ಲಿದ್ದಾಗ ಅವರ ಮೇಲೆ ನೀವು ನಂಬಿಕೆ ಇಡಬಹುದಾಗಿದೆ. ಅಲ್ಲದೆ ಅವರು ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಮಾಡುವ ಕ್ಷಮತೆ ಹೊಂದಿದ್ದಾರೆ ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
ಕೆಎಲ್ ರಾಹುಲ್ ಅವರಿಗೆ ತಂಡ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇವರಿಗೆ ಆರಂಭಿಕರಾಗಿ ಬ್ಯಾಟ್ ಮಾಡಲು ಸೂಚಿಸಿದರೆ ಅದಕ್ಕೂ ಸೈ, ನಾಲ್ಕನೇ ಹಾಗೂ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಹೇಳಿದರೆ ಅದಕ್ಕೂ ನ್ಯಾಯ ಒದಗಿಸುವ ಆಟಗಾರ. ಇವರು ಒತ್ತಡವನ್ನು ಮೆಟ್ಟಿನಿಂತು ಲೀಲಾಜಾಲವಾಗಿ ರನ್‌ಗಳನ್ನು ಏರಿಸಬಲ್ಲ ಕ್ಷಮತೆ ಹೊಂದಿದ್ದಾರೆ. ಒಂದು ವೇಳೆ ರಾಹುಲ್ ಬೇಗನೇ ಔಟ್ ಆಗಿದ್ದರೆ ಭಾರತ 240-250 ರನ್ ಸೇರಿಸುವುದು ಸಹ ಕಷ್ಟವಾಗಿತ್ತು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರಾಹುಲ್ ಮನಮೋಹಕ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಮಧ್ಯಮ ಕ್ರಮಾಂಕ ಹಾಗೂ ಫಿನಿಷರ್ ಪಾತ್ರಕ್ಕೆ ತಾನು ಫಿಟ್ ಆಗಬಲ್ಲೇ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ರನ್ ಏರಿಸುತ್ತಾ ಸಾಗಿದ ರಾಹುಲ್ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾದರು. 2023ರ ಏಕದಿನ ವಿಶ್ವಕಪ್‌ನಲ್ಲಿ ಕೆಎಲ್ ರಾಹುಲ್ ನೆದರ್‌ಲ್ಯಾಂಡ್ ಮೇಲೆ ಶತಕ ಬಾರಿಸಿದ್ದರು. ಅಲ್ಲಿಂದ ಇವರು ಮೂರಂಕಿ ಮುಟ್ಟಿರಲಿಲ್ಲ. 794 ದಿನಗಳ ಬಳಿಕ ರಾಹುಲ್ ಕ್ಲಾಸ್ ಬ್ಯಾಟಿಂಗ್ ಮಾಡಿ ಎಲ್ಲರ ಗಮನ ಸೆಳೆದರು.