ರಾಜ್‌ಕೋಟ್: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿ 284 ರನ್ ಸೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಇನ್ನು 15 ಎಸೆತಗಳು ಬಾಕಿ ಇರುವಂತೆ 3 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಈ ಮೂಲಕ ಪ್ರವಾಸಿ ಕಿವೀಸ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ನ್ಯೂಜಿಲೆಂಡ್ ಪರ ಡ್ಯಾರಿಲ್ ಮಿಚೆಲ್ ಶತಕ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಟೀಮ್ ಇಂಡಿಯಾದ ಪರ ಕೆಎಲ್ ರಾಹುಲ್ ಮೂರಂಕಿ ಮುಟ್ಟಿ ಸಂಭ್ರಮಿಸಿದರು.
ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ಪರ ಯಾವೊಬ್ಬ ಬ್ಯಾಟರ್ ಶತಕ ಬಾರಿಸಲಿಲ್ಲ. ಆದರೆ ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಭಾರತದ ಪರ ಕೆಎಲ್ ರಾಹುಲ್ ವರ್ಷದ ಮೊದಲ ಶತಕ ಬಾರಿಸಿದರು. ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಾಹುಲ್ 92 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 112 ರನ್ ಸಿಡಿಸಿದರು. ಈ ಮೂಲಕ ರಾಹುಲ್ ದೊಡ್ಡ ದಾಖಲೆಯನ್ನು ಬರೆದರು.

ಎರಡು ವರ್ಷಗಳ ಬಳಿಕ ರಾಹುಲ್ ಏಕದಿನ ಫಾರ್ಮೆಟ್‌ನಲ್ಲಿ ಶತಕ ಬಾರಿಸಿದರು. ಇವರು 2023ರ ಏಕದಿನ ವಿಶ್ವಕಪ್‌ನಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ಬೆಂಗಳೂರಿನಲ್ಲಿ ಶತಕ ಸಿಡಿಸಿದ್ದರು. ಈ ಸ್ಫೋಟಕ ಶತಕದ ಮೂಲಕ ರಾಹುಲ್ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆಯನ್ನು ಹಿಂದಿಕ್ಕಿದರು. ಅಜರುದ್ದೀನ್ ತಮ್ಮ 334 ಪಂದ್ಯಗಳ ಏಕದಿನ ವೃತ್ತಿಜೀವನದಲ್ಲಿ ಕೇವಲ ಏಳು ಶತಕಗಳನ್ನು ಗಳಿಸಿದ್ದರು. ರಾಹುಲ್ ತಮ್ಮ 93 ನೇ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಕೆಎಲ್ ರಾಹುಲ್ ಅವರ ಶತಕವು ರಾಜ್‌ಕೋಟ್‌ನಲ್ಲಿ ಭಾರತೀಯ ಬ್ಯಾಟರ್ ಬಾರಿಸಿದ ಅತ್ಯಧಿಕ ವೈಯಕ್ತಿಕ ರನ್ ಆಗಿದೆ. ಇವರು ಆಡಿದ ನಾಲ್ಕು ಏಕದಿನ ಪಂದ್ಯದಲ್ಲಿ ಮೂರನೇ 50 ಪ್ಲಸ್ ರನ್ ಆಗಿದೆ. ಇವರು ನಾಲ್ಕು ಏಕದಿನ ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ ಅಜೇಯರಾಗಿ ಉಳಿದಿದ್ದಾರೆ.
ಟೀಮ್ ಇಂಡಿಯಾದ ಭರವಸೆಯ ಆಟಗಾರ ಕೆಎಲ್ ರಾಹುಲ್ ಈ ಶತಕವನ್ನು ಬಾರಿಸುತ್ತಿದ್ದಂತೆ ವಿಶೇಷವಾಗಿ ಆಚರಿಸಿದರು. ಶತಕವನ್ನು ತಲುಪಿದ ನಂತರ, ಅವರು ತಮ್ಮ ಬಾಯಿಗೆ ಬೆರಳನ್ನು ಇಟ್ಟು ಸಂಭ್ರಮಿಸಿದರು. ಇದನ್ನು ಅವರ ಮಗಳಿಗೆ ಅರ್ಪಿಸಿದಂತೆ ಕಾಣುತ್ತಿತ್ತು. ಈ ಆಚರಣೆಯ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.