ಕೆಎಲ್ ರಾಹುಲ್ ಅಲ್ಪಾವಧಿಯ ಪರಿಹಾರ ಎಂದ ಪಾರ್ಥಿವ್ ಪಟೇಲ್

ನವದೆಹಲಿ, ಮೇ 20: ಟೀಮ್ ಇಂಡಿಯಾದ ಪರ ಟೆಸ್ಟ್‌ನಲ್ಲಿ ಅತೀ ಕಿರಿಯ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆಗಿ ಆಡಿದ್ದ ಪಾರ್ಥಿವ್ ಪಟೇಲ್, ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ರಾಹುಲ್ ಮತ್ತು ರಿಷಭ್ ಪಂತ್ ಇವರಲ್ಲಿ ಯಾರನ್ನು ಆರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಪಾರ್ಥಿವ್ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡರು.
'ಲಾಕ್‌ಡೌನ್ ಬಟ್ ನಾಟ್ ಔಟ್' ಸರಣಿಯ ಇತ್ತೀಚಿನ ಎಪಿಸೋಡ್‌ನಲ್ಲಿ ಮಾತನಾಡಿದ ಪಾರ್ಥಿವ್ ಪಟೇಲ್, ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಮೊದಲ ಆಯ್ಕೆಯ ಭಾರತದ ವಿಕೆಟ್ ಕೀಪರ್ ಯಾರು ಎಂಬ ಪ್ರಶ್ನೆಗೆ ಉತ್ತರಿಸಿ, ತನ್ನ ಮನಸ್ಸಿನಲ್ಲಿರುವುದನ್ನು ಹೇಳಿಕೊಂಡರು.
'ಈ ಸಂದರ್ಭದಲ್ಲಿ ಕೆಎಲ್ ರಾಹುಲ್ ಅವರನ್ನು ಪರಿಗಣಿಸಿ ಹೇಳುವುದಾದರೆ, ವಿಶ್ವಕಪ್ ಅನ್ನು ಮನಸ್ಸಿನಲ್ಲಿಟ್ಟುಕೊಂಡರೆ ರಾಹುಲ್ ಒಬ್ಬರು ಅಲ್ಪಾವಧಿ ಪರಿಹಾರ ಎಂದು ನನಗನ್ನಿಸುತ್ತದೆ. ವಿಶ್ವಕಪ್‌ನಲ್ಲೂ ರಾಹುಲ್ ಅವರ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಸುದೀರ್ಘ ಕಾಲಕ್ಕೆ ನಮಗೊಬ್ಬರು ಪರಿಣಿತ ವಿಕೆಟ್ ಕೀಪರ್ ಬೇಕಿದೆ,' ಎಂದು ಪಾರ್ಥಿವ್ ಹೇಳಿದ್ದಾರೆ.
'ರಿಷಭ್ ಪಂತ್ ಅವರೂ ಕೀಪಿಂಗ್ ಜವಾಬ್ದಾರಿ ನಿಭಾಯಿಸಬಲ್ಲರು. ನನ್ನ ಬಗ್ಗೆಯೇ ಹೇಳೋದಾದ್ರೆ ನಾನು ಪಾದಾರ್ಪಣೆ ಮಾಡುವಾಗ ನನಗೆ 17-18ರ ಹರೆಯ. ಆಗ ನನಗೆ ಒಳ್ಳೆಯ ಸರಣಿಗಳು ಸಿಗಲಿಲ್ಲ. ಕೆಲವು ವರ್ಷ ನಾನು ದೇಸಿ ಕ್ರಿಕೆಟ್‌ನತ್ತ ಮುಖ ಮಾಡಬೇಕಾಗಿ ಬಂತು. ಇದು ನನಗೆ ಕೌಶಲ ಬೆಳೆಸುಕೊಳ್ಳುವಲ್ಲಿ ಬಹಳಷ್ಟು ಸಹಾಯಕ್ಕೆ ಬಂತು.' ಎಂದು ಪಟೇಲ್ ವಿವರಿಸಿದರು.
'ರಿಷಭ್ ನನ್ನು ಪ್ರತೀ ಬಾರಿಯೂ ಭೇಟಿಯಾದಾಗ ನಾನು ಹೇಳುತ್ತಿರುತ್ತೇನೆ. ಜನ ನಿನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಯಾಕೆಂದರೆ ನಿನ್ನಲ್ಲಿ ಪ್ರತಿಭೆಯಿದೆ. ನಿನ್ನಲ್ಲಿ ಪ್ರತಿಭೆ ಇಲ್ಲದಿದ್ದರೆ ಜನ ನಿನ್ನ ಬಗ್ಗೆ ಮಾತನಾಡಲಾರರು. ಅದನ್ನು ತಲೆಯಲ್ಲಿಟ್ಟುಕೊ. ಕೆಲ ಸಮಯ ನೀನು ದೇಸಿ ಕ್ರಿಕೆಟ್‌ನತ್ತ ಹೋಗಬೇಕಾಗುತ್ತದೆ. ಫಾರ್ಮ್ ಅನ್ನು ಮರಳಿ ಪಡೆಯಬೇಕಾಗುತ್ತದೆ ಎಂದು,' ಎಂದು ಪಾರ್ಥಿವ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications