

ನವದೆಹಲಿ, ನವೆಂಬರ್ 29: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಗಾಗಿ ಭಾರತ ಕ್ರಿಕೆಟ್ ತಂಡದಲ್ಲಿ ಆರಂಭಿಕರ ಸ್ಥಾನಕ್ಕೆ ಪ್ರಮುಖ ಸ್ಪರ್ಧಿಯಾಗಿರುವ ಕೆಎಲ್ ರಾಹುಲ್, ತಾನಾಗಿ ತಂಡದಿಂದ ಹೊರ ನಡೆಯಲು ಹೊಸದಾರಿ ಹುಡುಕುತ್ತಿದ್ದಾರೆ ಎಂದು ತಂಡದ ಸಹಾಯಕ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಹೇಳಿದ್ದಾರೆ.
ರಾಹುಲ್‌ಗೆ ಅನೇಕ ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಒದಗಿಸಲಾಗಿತ್ತು. ಆದರೆ ಯುವ ಆಟಗಾರ ರಾಹುಲ್ ಯಾವುದೇ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರಿಸಿಲ್ಲ. ಮುಂಬರಲಿರುವ ಟೆಸ್ಟ್‌ನಲ್ಲೂ ರಾಹುಲ್‌ಗೆ ಅವಕಾಶ ನೀಡುವ ನಿರೀಕ್ಷೆಯಿದೆ. ಆದರೆ ಅವಕಾಶದ ಜೊತೆಗೆ ರಾಹುಲ್‌ಗೆ ಈ ಮುಖಾಂತರ ಎಚ್ಚರಿಕೆಯನ್ನೂ ರವಾನಿಸಲಾಗಿದೆ.
'ಸುಮಾರು 30 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೆಎಲ್ ರಾಹುಲ್ ಇದೇ ಪ್ರದರ್ಶನವನ್ನು ಮುಂದುವರೆಸಿದರೆ ತಂಡದಲ್ಲಿ ಯುವ ಆಟಗಾರರ ಸಾಲಿನಲ್ಲಿ ಅವರಿನ್ನು ಹೆಚ್ಚುದಿನ ಕಾಣಲು ಸಾಧ್ಯವಿಲ್ಲ. ಅವರಿಗೆ ಜವಾಬ್ದಾರಿಯಿದೆ. ಅವರು ಅದನ್ನು ಅರ್ಥ ಮಾಡಿಕೊಳ್ಳಬೇಕು' ಎಂದು ಬಾಂಗರ್ ಗುರುವಾರ (ನವೆಂಬರ್ 29) ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಆಡಿದ್ದ ಟಿ20 ಸರಣಿಯಲ್ಲೂ ರಾಹುಲ್ ಕಳಪೆ ಬ್ಯಾಟಿಂಗ್ ತೋರಿಸಿದ್ದರು. ಮೊದಲ ಪಂದ್ಯದಲ್ಲಿ 13, ಅಂತಿಮ ಪಂದ್ಯದಲ್ಲಿ 14 ರನ್ ಗಳಿಸಿದ್ದರು. ಸಿಡ್ನಿಯಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲೂ ರಾಹುಲ್ 3 ರನ್ ಗಳಿಸಿ ಕ್ರೀಡಾಭಿಮಾನಿಗಳ, ಪರಿಣಿತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಭ್ಯಾಸ ಪಂದ್ಯದಲ್ಲಿ ರಾಹುಲ್ ಆರಂಭಿರಾಗಿ ಬ್ಯಾಟಿಂಗ್‌ಗೆ ಇಳಿದಿದ್ದರು. ಆಸ್ಟ್ರೇಲಿಯಾ ವಿರುದ್ಧ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ, ಪೃಥ್ವಿ ಶಾ 66, ಪೂಜಾರ 54, ಕೊಹ್ಲಿ 64, ರಹಾನೆ 56, ಹನುಮ ವಿಹಾರಿ 53, ರೋಹಿತ್ 40 ರನ್ ನೆರವಿನೊಂದಿಗೆ 92 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 358 ರನ್ ಪೇರಿಸುವ ಮೂಲಕ ಮೊದಲ ಇನ್ನಿಂಗ್ಸ್ ಮುಗಿಸಿದೆ. ಆಸೀಸ್ ಇನ್ನಿಂಗ್ಸ್ ಗೆ ಇಳಿದಿದೆ.