ಗಾಯಗೊಂಡು ತಂಡದಿಂದ ಹೊರಬಿದ್ದ ಕೆಎಲ್ ರಾಹುಲ್ ಮತ್ತೊಂದು ಪ್ರಮುಖ ಸರಣಿಯಿಂದಲೂ ಹೊರಕ್ಕೆ?

ಕೆಎಲ್ ರಾಹುಲ್ ಸದ್ಯ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಬೇಕಿದ್ದ ಆಟಗಾರ. ಆದರೆ, ಸರಣಿಯ ಮೊದಲ ಪಂದ್ಯ ಆರಂಭಕ್ಕೆ ಇನ್ನೊಂದು ದಿನ ಬಾಕಿ ಇರುವಾಗ ಅಭ್ಯಾಸ ನಡೆಸುವ ವೇಳೆ ತೊಡೆಸಂದು ಗಾಯಕ್ಕೆ ಒಳಗಾದ ರಾಹುಲ್ ಚಿಕಿತ್ಸೆಗೆಂದು ಸರಣಿಯಿಂದ ಹೊರಬೀಳಬೇಕಾಗಿ ಬಂತು.
ಅದರಂತೆ ಕೆಎಲ್ ರಾಹುಲ್ ಸರಣಿಯಿಂದ ಹೊರಬಿದ್ದಿದ್ದು, ರಿಷಭ್ ಪಂತ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ ಹಾಗೂ ತಂಡ ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ ಮೂರನೇ ಪಂದ್ಯದಲ್ಲಿ ಜಯ ಸಾಧಿಸಿದೆ. ಹೀಗೆ ಗಾಯದ ಸಮಸ್ಯೆಗೊಳಗಾಗಿ ಹೊರಬಿದ್ದ ಕೆಎಲ್ ರಾಹುಲ್ ಸದ್ಯ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಇನ್ನು ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮುಕ್ತಾಯವಾದ ನಂತರ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಸರಣಿಗಳನ್ನು ಆಡಲು ತೆರಳಲಿದ್ದು, ಈ ತಂಡದಲ್ಲಿ ಗಾಯಗೊಂಡಿರುವ ಕೆಎಲ್ ರಾಹುಲ್ ಭಾಗವಹಿಸುತ್ತಾರಾ ಅಥವಾ ಅಲ್ಲಿಯವರೆಗೂ ಚೇತರಿಸಿಕೊಳ್ಳಲಾಗದೇ ಆ ಸರಣಿಯನ್ನೂ ಕೈತಪ್ಪಿಸಿಕೊಳ್ಳಲಿದ್ದಾರಾ ಎಂಬ ಅನುಮಾನ ಹಾಗೂ ಪ್ರಶ್ನೆ ಇದೀಗ ಕ್ರಿಕೆಟ್ ವೀಕ್ಷಕರಲ್ಲಿ ಹಾಗೂ ಕೆಎಲ್ ರಾಹುಲ್ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಈ ಕುರಿತಾಗಿ ವರದಿಯೊಂದು ಹೊರಬಿದ್ದಿದ್ದು, ಕೆಎಲ್ ರಾಹುಲ್ ಭಾಗವಹಿಸುವಿಕೆಯ ಕುರಿತು ಈ ಕೆಳಕಂಡತೆ ಮಾಹಿತಿಯನ್ನು ನೀಡಿದೆ.

ಇಂಗ್ಲೆಂಡ್ ವಿರುದ್ಧದ ಒಂದು ಟೆಸ್ಟ್ ಪಂದ್ಯಕ್ಕೆ ರಾಹುಲ್ ಅನುಮಾನ, ಸೀಮಿತ ಓವರ್ ಸರಣಿ ಬಗ್ಗೆ ಇಲ್ಲ ಸ್ಪಷ್ಟತೆ
ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಆಯೋಜನೆಯಾಗಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಕೊರೊನಾ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿತ್ತು. ಆ ಪಂದ್ಯವನ್ನು ಈ ಬಾರಿಯ ಪ್ರವಾಸದಲ್ಲಿ ಆಯೋಜಿಸಲಾಗಿದೆ. ಇನ್ನು ಈ ಪಂದ್ಯ ಜುಲೈ 1ರಂದು ಆರಂಭಗೊಳ್ಳಲಿದ್ದು, ಇನ್ನೂ ಚಿಕಿತ್ಸೆ ಮುಕ್ತಾಯವಾಗದ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದು ಕ್ರಿಕ್‌ಬಜ್‌ನಲ್ಲಿ ವರದಿಯಾಗಿದೆ. ಅಷ್ಟೇ ಅಲ್ಲದೇ ನಂತರ ನಡೆಯಲಿರುವ ಟಿ ಟ್ವೆಂಟಿ ಹಾಗೂ ಏಕದಿನ ಸರಣಿಗಳಿಗೆ ಕೆಎಲ್ ರಾಹುಲ್ ಲಭ್ಯರಾಗುವುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎಂದೂ ಸಹ ವರದಿ ತಿಳಿಸಿದೆ.

2 ಗುಂಪುಗಳಾಗಿ ಇಂಗ್ಲೆಂಡ್‌ಗೆ ಹಾರಲಿದೆ ಟೀಮ್ ಇಂಡಿಯಾ
ಇನ್ನು ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿರುವ ಟೀಮ್ ಇಂಡಿಯಾ ಎರಡು ಗುಂಪುಗಳಾಗಿಪ ಪ್ರಯಾಣ ಬೆಳೆಸಲಿದೆ ಎಂಬ ವರದಿಯೂ ಸಹ ಆಗಿದೆ. ಸದ್ಯ ವಿಶ್ರಾಂತಿ ಪಡೆಯುತ್ತಿರುವ ಕ್ರಿಕೆಟಿಗರ ಗುಂಪು ನಾಳೆ ( ಜೂನ್ 16 ) ಇಂಗ್ಲೆಂಡ್ ಪ್ರಯಾಣವನ್ನು ಕೈಗೊಂಡರೆ, ರಾಹುಲ್ ದ್ರಾವಿಡ್, ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ಗುಂಪು ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿ ಮುಕ್ತಾಯವಾದ ನಂತರ ಜೂನ್ 20ಕ್ಕೆ ಇಂಗ್ಲೆಂಡ್‌ಗೆ ಹಾರಲಿದೆ.

ಇಂಗ್ಲೆಂಡ್ ಟೆಸ್ಟ್‌ಗೆ ಪ್ರಕಟವಾಗಿದ್ದ ತಂಡ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟವಾಗಿದ್ದ ಟೀಮ್ ಇಂಡಿಯಾದಲ್ಲಿ ಕೆಎಲ್ ರಾಹುಲ್ ಹೊರತುಪಡಿಸಿ ರೋಹಿತ್ ಶರ್ಮಾ ಮತ್ತು ಶುಬ್‌ಮನ್ ಗಿಲ್ ಇರುವ ಕಾರಣ ಕೆಎಲ್ ರಾಹುಲ್ ಬದಲಿ ಆಟಗಾರನನ್ನು ಆರಿಸಿಲ್ಲ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟವಾಗಿದ್ದ ಟೀಮ್ ಇಂಡಿಯಾ ಹೀಗಿತ್ತು: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications