ಬ್ಯಾಟಿಂಗ್ ನಲ್ಲಿ ಯಶಸ್ವಿ, ನಾಯಕನಾಗಿ ಡುಮ್ಕಿ: ಇವತ್ತಾದ್ರೂ ವಿನ್ ಆಗುತ್ತಾ ಕೆ.ಎಲ್. ರಾಹುಲ್ ಪಡೆ
ಏಕದಿನ ಮತ್ತು ಟಿ20 ಮಾದರಿ ಕ್ರಿಕೆಟ್ ನಲ್ಲಿ ಸದ್ಯ ತನ್ನ ಫಾರಂ ಮೂಲಕ ಭಾರೀ ಸುದ್ದಿಯಲ್ಲಿರುವ ಕೆ.ಎಲ್. ರಾಹುಲ್ ತನ್ನ ಪ್ರಚಂಡ ಫಾರಂ ಅನ್ನು ಐಪಿಎಲ್ ನಲ್ಲೂ ಮುಂದುವರಿಸಿದ್ದಾರೆ. ಆದರೆ, ಅವರ ತಂಡ, ಸೋಲಿನ ಸರಪಳಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.
ಕರ್ನಾಟಕದ ಆಟಗಾರರೇ ಹೆಚ್ಚಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಆಡಿದ ಐದು ಪಂದ್ಯದಲ್ಲಿ ಕೇವಲ್ ಒಂದು ಮ್ಯಾಚ್ ಅನ್ನು ಗೆದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ದುಬೈ ಮೈದಾನದಲ್ಲಿ ಪಂಜಾಬ್ ತಂಡ ಇಂದು (ಅ 8) ಹೈದರಾಬಾದ್ ತಂಡದ ವಿರುದ್ದ ಸೆಣಸಲಿದೆ.
ಪ್ಲೇ ಆಫ್ ಪ್ರವೇಶಿಸಲು ಇಂದಿನ ಪಂದ್ಯದಿಂದ ಇನ್ನುಳಿದ ಎಲ್ಲಾ ಪಂದ್ಯಗಳು ರಾಹುಲ್ ಪಡೆಗೆ ನಿರ್ಣಾಯಕವಾಗಲಿದೆ. ತಂಡದ ಕೆಲವು ಆಟಗಾರರು ಉತ್ತಮ ಫಾರಂನಲ್ಲಿದ್ದರೂ, ಪಂಜಾಬ್ ತಂಡಕ್ಕೆ ಗೆಲುವಿನ ಸೂತ್ರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಜಿದ್ದಿಗೆ ಬಿದ್ದಂತೆ ಆಡಿದ್ದ ರಾಹುಲ್ ಪಡೆ, ಇದುವರೆಗೆ ಅದೊಂದೇ ಪಂದ್ಯವನ್ನು ಗೆದ್ದು, ಮಿಕ್ಕೆಲ್ಲಾ ಪಂದ್ಯದಲ್ಲಿ ಡುಮ್ಕಿ ಹೊಡೆದಿದೆ. ಇದುವರೆಗೆ ರಾಹುಲ್ ಪರ್ಫಾರ್ಮೆನ್ಸ್ ಹೇಗಿದೆ?

ರಾಹುಲ್ ಮತ್ತು ಮಾಯಾಂಕ್ ಉತ್ತಮ ಆಟ
ಹಾಲೀ ಐಪಿಎಲ್ ಸರಣಿಯ ಆರಂಭಿಕ ಪಂದ್ಯದಲ್ಲಿ ಪಂಜಾಬ್ ತಂಡ, ಡೆಲ್ಲಿ ತಂಡದ ವಿರುದ್ದ ಸೂಪರ್ ಓವರ್ಸ್ ನಲ್ಲಿ ಸೋಲು ಅನುಭಸಿತ್ತು. ಕಾಟ್ರೆಲ್, ಮೊಹಮ್ಮದ್ ಶಮಿ, ರೈ ಬಿಷ್ಣೋಯಿ ಉತ್ತಮವಾಗಿ ಬೌಲಿಂಗ್ ಮಾಡಿ ಡೆಲ್ಲಿ ತಂಡವನ್ನು ನಿಯಂತ್ರಿಸಿದ್ದರು. ಇನ್ನು, ರಾಹುಲ್ ಮತ್ತು ಮಾಯಾಂಕ್ ಉತ್ತಮವಾಗಿ ಆಡಿದ್ದರೂ, ಮಧ್ಯಮ ಕ್ರಮಾಂಕದ ಆಟಗಾರರ ವೈಫಲ್ಯದಿಂದಾಗಿ ಗೆಲ್ಲುವ ಪಂದ್ಯವನ್ನು ಪಂಜಾಬ್ ಸೋತಿತ್ತು.

ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಆರ್ಭಟಿಸಿದ್ದ ರಾಹುಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಂತೂ ರಾಹುಲ್ ಅಕ್ಷರಸಃ ಆರ್ಭಟಿಸಿದ್ದರು. 132ರನ್ ಅನ್ನು ರಾಹುಲ್ ಹೊಡೆದಿದ್ದರು. ಬೆಂಗಳೂರು ರಾಹುಲ್ ಹೊಡೆದಷ್ಟು ರನ್ನನ್ನೂ ಹೊಡೆಯಲಾಗದೇ ಸೋತಿತ್ತು. ಈ ಪಂದ್ಯದಲ್ಲಿ ಪಂಜಾಬ್ ತಂಡದ ಎಲ್ಲಾ ಬೌಲರ್ ಗಳು ಲಯಬದ್ದವಾಗಿ ಬೌಲ್ ಮಾಡಿದ್ದರು.

ರಾಜಸ್ಥಾನ ವಿರುದ್ದ ಉತ್ತಮ ಫೈಟ್ ನೀಡಿ ಸೋಲು
ಇನ್ನು ತನ್ನ ಮೂರನೇ ಪಂದ್ಯದಲ್ಲೂ ಪಂಜಾಬ್ ತಂಡ, ರಾಜಸ್ಥಾನ ವಿರುದ್ದ ಉತ್ತಮ ಫೈಟ್ ನೀಡಿ ಸೋಲು ಅನುಭವಿಸಿತು. ಆ ಪಂದ್ಯದಲ್ಲೂ ರಾಹುಲ್ 69 ರನ್ ಹೊಡೆದಿದ್ದರು. ಈ ಪಂದ್ಯದಲ್ಲಿ, ಎರಡು ವಿಕೆಟ್ ಕಳೆದುಕೊಂಡು 223 ರನ್ ಹೊಡೆದರೂ, ಬೌಲರ್ ಗಳ ಪ್ರದರ್ಶನ ನಿರಾಶಾದಾಯಕವಾಗಿತ್ತು.

ಚೆನ್ನೈ ಯಾವುದೇ ವಿಕೆಟ್ ಕಳೆದುಕೊಳ್ಳದೇ ಪಂಜಾಬ್ ವಿರುದ್ದ ಗೆಲುವು
ಮುಂಬೈ ವಿರುದ್ದದ ಪಂದ್ಯದಲ್ಲಿ ಪಂಜಾಬ್ ತಂಡ ಹೀನಾಯ ಸೋಲು ಅನುಭವಿಸಿತು. ಆ ಪಂದ್ಯದಲ್ಲಿ ರಾಹುಲ್ ಬ್ಯಾಟಿಂಗ್ ಮತ್ತು ನಾಯಕತ್ವದ ವಿಚಾರದಲ್ಲೂ ಫೇಲ್ ಆಗಿದ್ದರು. ಇನ್ನು, ಐದನೇ ಪಂದ್ಯದಲ್ಲಿ, ಉತ್ತಮವಾಗಿ ಬ್ಯಾಟ್ ಮಾಡಿದರೂ, ಚೆನ್ನೈ ಯಾವುದೇ ವಿಕೆಟ್ ಕಳೆದುಕೊಳ್ಳದೇ ಪಂಜಾಬ್ ವಿರುದ್ದ ಗೆಲುವು ಸಾಧಿಸಿತ್ತು. ಇಂದು, ರಾಹುಲ್ ಪಡೆ, ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಾದರೂ ಪಂಜಾಬ್ ಜಯ ಸಾಧಿಸುತ್ತಾ, ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications