ಚಾಂಪಿಯನ್ಸ್ ಟ್ರೋಫಿ ಇತಿಹಾಸದ ಪುಟ ಸೇರಿದೆ. ಟೀಮ್ ಇಂಡಿಯಾ ಮೂರನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟು ನವ ದಾಖಲೆಯನ್ನು ಮಾಡಿದೆ. ಅತಿ ಹಚ್ಚು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಹೆಗ್ಗಳಿಕೆ ಟೀಮ್ ಇಂಡಿಯಾದ್ದಾಗಿದೆ. ಈ ಟೂರ್ನಿ ಮುಗಿದ ಬೆನ್ನಲ್ಲೆ ಭಾರತದಲ್ಲಿ ಶ್ರೀಮಂತ ಲೀಗ್ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸ್ಟಾರ್ ಆಟಗಾರರು ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಅಖಾಡ ಪ್ರವೇಶಿಸಲಿದ್ದಾರೆ. ಆದರೆ ಈ ಮಧ್ಯೆ ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಈ ಆಟಗಾರ ಅನುಪಸ್ಥಿತಿ ಬಹುವಾಗಿ ಕಾಡುವ ಸಾಧ್ಯತೆ ಇದೆ.
ದೆಹಲಿ ಕ್ಯಾಪಿಟಲ್ಸ್ ಟೆನ್ಷನ್ ಹೆಚ್ಚು ಮಾಡಿದ ಆಟಗಾರ ಬೇರೆ ಯಾರು ಅಲ್ಲ ಕನ್ನಡಿಗ ಕೆಎಲ್ ರಾಹುಲ್. ರಾಹುಲ್. ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಕೆಲವು ಪಂದ್ಯಗಳಿಂದ ದೂರ ಉಳಿಯುವ ಸಾಧ್ಯತೆ ಇದೆ. 32 ವರ್ಷದ ಸ್ಟಾರ್ ಬ್ಯಾಟರ್ ಮನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಅತಿಥಿ ಆಗಮನವಾಗಲಿದೆ. ಈ ಋತುವಿನ ಐಪಿಎಲ್ ಆರಂಭಕ್ಕೂ ಮುನ್ನ ರಾಹುಲ್ ತಮ್ಮ ಮೊದಲ ಮಗುವನ್ನು ಎದುರು ನೋಡ್ತಾ ಇದ್ದಾರೆ. ಈ ಸಮಯದಲ್ಲಿ ರಾಹುಲ್ ತಮ್ಮ ಪತ್ನಿಯೊಂದಿಗೆ ಕಾಲ ಕಳೆಯಲು ಬಯಸುತ್ತಾರೆ ಹೀಗಾಗಿ ಆರಂಭಿಕ ಪಂದ್ಯಗಳಿಂದ ದೂರ ಉಳಿಯಬಹುದು.

ವರದಿಗಳ ಪ್ರಕಾರ, ಕೆಎಲ್ ರಾಹುಲ್ ಅವರ ಪತ್ನಿ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಈ ವಿಶೇಷ ಸಮಯದಲ್ಲಿ ರಾಹುಲ್ ತಮ್ಮ ಕುಟುಂಬದೊಂದಿಗೆ ಕಳಿಯಲು ಬಯಸುತ್ತಾರೆ. ಹೀಗಾಗಿ ಡೆಲ್ಲಿ ಆರಂಭಿಕ ಕೆಲವು ಪಂದ್ಯಗಳಿಂದ ರಾಹುಲ ದೂರ ಉಳಿಯುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ವಿಶೇಷ ಸಮಯದ ಬಳಿಕ ರಾಹುಲ್ ಬೇಗ ತಂಡವನ್ನು ಸೇರಿಕೊಳ್ಳಬಹುದು ಎಂದು ನಂಬಲಾಗಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಇವರು ಆಡಿದ 4 ಇನಿಂಗ್ಸ್‌ನಲ್ಲಿ ರಾಹುಲ್ ಮೂರು ಬಾರಿ ನಾಟೌಟ್ ಆಗಿ ಉಳಿದಿದ್ದರು. ಅಲ್ಲದೆ ಉಪಾಂತ್ಯ ಹಾಗೂ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭರ್ಜರಿ ಬ್ಯಾಟಿಂಗ್ ನೆರವಿನಿಂದ ತಂಡಕ್ಕೆ ಗೆಲುವಿನ ಹಾರ ತೊಡಿಸಿದ್ದರು. ಐಪಿಎಲ್‌ನಲ್ಲಿ ಈ ಆತ್ಮ ವಿಶ್ವಾಸವನ್ನೇ ಇಟ್ಟುಕೊಂಡು ಬರುತ್ತಾರೆ.

ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ಈಗಾಗಲೇ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅಲ್ಲದೆ ಇವರನ್ನು ಎಲ್‌ಎಸ್‌ಜಿ ತಂಡ ಕೈ ಬಿಟ್ಟ ಕಾರಣ ಸ್ಟಾರ್ ಆಟಗಾರನಿಗೆ 14 ಕೋಟಿ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿಸಿಕೊಂಡಿದೆ. ರಾಹುಲ್ ಇದುವರೆಗೆ ಆಡಿದ 132 ಐಪಿಎಲ್ ಪಂದ್ಯಗಳಲ್ಲಿ 4683 ರನ್ ಗಳಿಸಿದ್ದಾರೆ. ಈ ವೇಳೆ 4 ಶತಕ ಹಾಗೂ 37 ಅರ್ಧಶತಕಗಳು ಸೇರಿವೆ.