ಜೈಪುರ್: ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಹಾಗೂ ಪತುಮ್ ನಿಸ್ಸಂಕಾ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 19ನೇ ಆವೃತ್ತಿ ಐಪಿಎಲ್‌ನ 43ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್‌ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ, ಇತಿಹಾಸ ನಿರ್ಮಿಸಿತು. ಈ ಗೆಲುವಿನ ಮೂಲಕ ಡೆಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ರನ್‌ಗಳ ಚೇಸ್ ಮಾಡಿ ಅಬ್ಬರಿಸಿತು.
ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಪತುಮ್ ನಿಸ್ಸಂಕಾ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಜೋಡಿ ಅಬ್ಬರಿಸಿತು. ಈ ಜೋಡಿ ಪವರ್ ಪ್ಲೇನಲ್ಲಿ ಕಮಾಲ್ ಪ್ರದರ್ಶನ ನೀಡಿತು. ಪತುಮ್, ರಾಹುಲ್ ಜೋಡಿ ರನ್ ರೇಟ್ ಒತ್ತಡ ತಂಡದ ಮೇಲೆ ಬೀಳದಂತೆ ನೋಡಿಕೊಂಡಿತು. ಈ ಜೋಡಿ ಪವರ್ ಪ್ಲೇನಲ್ಲಿ 70 ರನ್ ಸೇರಿಸಿತು.

ಮೊದಲ ವಿಕೆಟ್‌ಗೆ ಪತುಮ್ ನಿಸ್ಸಂಕಾ ಹಾಗೂ ರಾಹುಲ್ ಜೊತೆಗೂಡಿ 57 ಎಸೆತಗಳಲ್ಲಿ 110 ರನ್ ಸೇರಿಸಿತು. ಈ ವೇಳೆ ಪತುಮ್ ನಿಸ್ಸಂಕಾ 33 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 62 ರನ್ ಸೇರಿಸಿ ಮಿಂಚಿದರು.
ಎರಡನೇ ವಿಕೆಟ್‌ಗೆ ಕೆಎಲ್ ರಾಹುಲ್ ಹಾಗೂ ನಿತೀಶ್ ರಾಣಾ ಜೋಡಿ ಆರ್ಭಟಿಸಿತು. ಈ ಜೋಡಿ ಸಹ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಈ ಜೋಡಿ 30 ಎಸೆತಗಳಲ್ಲಿ 61 ರನ್ ಸೇರಿಸಿತು. ಈ ಹಂತದಲ್ಲಿ ನಿತೀಶ್ ರಾಣಾ 33 ರನ್ ಸಿಡಿಸಿದರು. ಕೆಎಲ್ ರಾಹುಲ್ 40 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ 75 ರನ್ ಬಾರಿಸಿ, ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು.
4ನೇ ವಿಕೆಟ್‌ಗೆ ಟ್ರಿಸ್ಟನ್ ಸ್ಟಬ್ಸ್ (ಅಜೇಯ 18) ಹಾಗೂ ಆಶುತೋಷ್ ಶರ್ಮಾ (ಅಜೇಯ 25) ಜೋಡಿ ಆರ್ಭಟಿಸಿತು. ಈ ಜೋಡಿ 24 ಎಸೆತಗಳಲ್ಲಿ ಅಜೇಯ 49 ರನ್‌ಗಳ ಜೊತೆಯಾಟ ನೀಡಿತು. ಅಂತಿಮವಾಗಿ ಡೆಲ್ಲಿ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 226 ರನ್ ಸೇರಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ (6) ಮತ್ತು ವೈಭವ್ ಸೂರ್ಯವಂಶಿ (4) ಅವರು ಕೈಲ್ ಜೇಮಿಸನ್ ಹಾಗೂ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ಮೂರನೇ ವಿಕೆಟ್‌ಗೆ ಧ್ರುವ್ ಜುರೇಲ್ (42) ಮತ್ತು ರಿಯಾನ್ ಪರಾಗ್ ಜೋಡಿ ಡೆಲ್ಲಿ ಬೌಲರ್‌ಗಳನ್ನು ದಂಡಿಸಿ 102 ರನ್‌ಗಳ ಅಮೂಲ್ಯ ಜೊತೆಯಾಟದ ಕಾಣಿಕೆ ನೀಡಿತು. ಬಳಿಕ ರವೀಂದ್ರ ಜಡೇಜಾ (20) ಕೂಡ ನಾಯಕನಿಗೆ ಉತ್ತಮ ಸಾಥ್ ನೀಡಿದರು. ಜವಾಬ್ದಾರಿಯುತ ಆಟವಾಡಿದ ನಾಯಕ ರಿಯಾನ್ ಪರಾಗ್ ಕೇವಲ 50 ಎಸೆತಗಳಲ್ಲಿ 90 ರನ್ (8 ಬೌಂಡರಿ, 5 ಸಿಕ್ಸರ್) ಸಿಡಿಸಿ ಅಬ್ಬರಿಸಿದರು.
ಅಂತಿಮ ಹಂತದಲ್ಲಿ ಡೊನೊವನ್ ಫೆರೀರಾ ಅಕ್ಷರಶಃ ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿದರು. ಕೇವಲ 14 ಎಸೆತಗಳಲ್ಲಿ 47 ರನ್ ಚಚ್ಚಿದ ಇವರು ತಂಡದ ಮೊತ್ತವನ್ನು 225/6ಕ್ಕೆ ತಲುಪಿಸಿದರು. ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ 40 ರನ್ ನೀಡಿ 3 ವಿಕೆಟ್ ಪಡೆದರು.