ಐಯ್ಯರ್- ಅಶ್ವಿನ್ ಬ್ಯಾಟಿಂಗ್ ಸಾಹಸಕ್ಕೆ ನಾಯಕ ರಾಹುಲ್ ಹರ್ಷ: ಸರಣಿ ಗೆದ್ದ ಬಳಿಕ ಕೆಎಲ್ ಹೇಳಿದ್ದೇನು?

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಸುಲಭ ಸವಾಲು ಪಡೆದಿದ್ದ ಭಾರತ ಬ್ಯಾಟಿಂಗ್‌ನಲ್ಲಿ ಕುಸಿತ ಅನುಭವಿಸಿದ ಕಾರಣ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಬಳಿಕ ಶ್ರೇಯಸ್ ಐಯ್ಯರ್ ಹಾಗೂ ಆರ್ ಅಶ್ವಿನ್ ಅವರ ಅದ್ಭುತ ಬ್ಯಾಟಿಂಗ್‌ನ ಕಾರಣದಿಂದಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 3 ವಿಕೆಟ್‌ಗಳ ಅಂತರದ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯನ್ನು ವೈಟ್‌ವಾಶ್ ಮಾಡಿಕೊಂಡಿದೆ.
ಇನ್ನು ಈ ರೋಚಕ ಪಂದ್ಯದ ಬಳಿಕ ಟೀಮ್ ಇಂಡಿಯಾ ಹಂಗಾಮಿ ನಾಯಕ ಕೆಎಲ್ ರಾಹುಲ್ ಮಾತನಾಡಿದ್ದಾರೆ. ಶ್ರೇಯಸ್ ಐಯ್ಯರ್ ಹಾಗೂ ಆರ್ ಅಶ್ವಿನ್ ಈ ಸವಾಲನ್ನು ಬಹಳ ಸರಳವಾಗಿ ಹಾಗೂ ತಮ್ಮದೇ ಶೈಲಿಯಲ್ಲಿ ಪಂದ್ಯವನ್ನು ಅಂತ್ಯಗೊಳಿಸಿದ್ದಾರೆ ಎಂದು ಕೆಎಲ್ ರಾಹುಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಶಂಸೆ ವ್ಯಕ್ತಪಡಿಸಿದ ಕೆಎಲ್ ರಾಹುಲ್
"ಬ್ಯಾಟಿಂಗ್ ನಡೆಸುತ್ತಿರುವ ಆಟಗಾರರ ಮೇಲೆ ನಂಬಿಕೆಯಿತ್ತು. ನಂಬಿಕೆಯಿದ್ದರು ಕೂಡ ಆತಂಕ ಇದ್ದೇ ಇರುತ್ತದೆ ಯಾಕೆಂದರೆ ನಾವು ಕೂಡ ಮನುಷ್ಯರೇ. ಅಂಗಳಕ್ಕಿಳಿದ ಬ್ಯಾಟರ್‌ಗಳ ಮೇಲೆ ನಾವು ನಂಬಿಕೆಯಿಟ್ಟುಕೊಂಡಿದ್ದೆವು. ಇಂದು ಶ್ರೇಯಸ್ ಐಯ್ಯರ್ ಹಾಗೂ ಆರ್ ಅಶ್ವಿನ್ ಬಹಳ ಸರಳವಾಗಿ ಹಾಗೂ ತಮ್ಮದೇ ಶೈಲಿಯಲ್ಲಿ ಈ ಗೆಲುವನ್ನು ತಂದುಕೊಟ್ಟರು"ಎಂದಿದ್ದಾರೆ ಟೀಮ್ ಇಂಡಿಯಾದ ಹಂಗಾಮಿ ನಾಯಕ ಕೆಎಲ್ ರಾಹುಲ್.

ಅಶ್ವಿನ್- ಐಯ್ಯರ್ ಹೋರಾಟಕ್ಕೆ ಶ್ಲಾಘನೆ
"ಟೀಮ್ ಇಂಡಿಯಾದ ಗೆಲುವಿಗಾಗಿ ಅವರಿಬ್ಬರು ಬಹಳ ಅದ್ಭುತವಾದ ಹೋರಾಟ ನಡೆಸಿದ್ದಾರೆ. ಇದು ಸರಳವಾದ ಹೋರಾಟವಾಗಿರುತ್ತದೆ ಎಂದು ನಾವು ಭಾವಿಸಿರಲೇ ಇಲ್ಲ. ಬಾಂಗ್ಲಾದೇಶ ಬ್ಯಾಟಿಂಗ್ ನಡೆಸಿದಂತೆಯೇ ನಾವು ಕೂಡ ಬಹಳ ಕಠಿಣ ಸ್ಥಿತಿಯನ್ನು ಎದುರಿಸಲಿದ್ದೇವೆ ಎಂಬ ನಿರೀಕ್ಷೆಯಿತ್ತು. ಹೊಸ ಚೆಂಡಿನಲ್ಲಿ ಇಲ್ಲಿ ಬಹಳ ಕಷ್ಟವಿತ್ತು. ನಾವು ಅಂದುಕೊಂಡದ್ದಕ್ಕಿಂತಲೂ ಹೆಚ್ಚಿನ ವಿಕೆಟ್ ಕಳೆದುಕೊಂಡೆವು"ಎಂದಿದ್ದಾರೆ ಟೀಮ್ ಇಂಡಿಯಾದ ಹಂಗಾಮಿ ನಾಯಕ ಕೆಎಲ್ ರಾಹುಲ್.

ಸೋಲಿನ ಸುಳಿಗೆ ಸಿಲುಕಿದ್ದ ಭಾರತ
ಈ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತದ ವಿರುದ್ಧ ಚೊಚ್ಚಲ ಟೆಸ್ಟ್ ಗೆಲುವು ಸಾಧಿಸುವ ಅತ್ಯಂತ ಸನಿಹಕ್ಕೆ ಬಂದಿತ್ತು. 74 ರನ್‌ಗಳಿಗೆ ಭಾರತದ 7 ವಿಕೆಟ್ ಕಬಳಿಸುವ ಮೂಲಕ ಗೆಲುವಿನ ಕನಸು ಕಾಣಲು ಆರಂಭಿಸಿತ್ತು. ಆದರೆ ಬಳಿಕ ಜೊತೆಯಾದ ಶ್ರೇಯಸ್ ಐಯ್ಯರ್ ಹಾಗೂ ಆರ್ ಅಶ್ವಿನ್ ಜೋಡಿ ಬಾಂಗ್ಲಾ ಬೌಲಿಂಗ್ ವಿಭಾಗಕ್ಕೆ ಸವಾಲಾದರು. ಮುರಿಯದ 8ನೇ ವಿಕೆಟ್‌ಗೆ ಈ ಜೋಡಿ 105 ಎಸೆತಗಳಲ್ಲಿ 71 ರನ್ ಸಿಡಿಸಿದ್ದಾರೆ. ಈ ಮೂಲಕ ಭಾರತ ತಂಡದ ಗೆಲುವನ್ನು ಸಾರಿದ್ದಾರೆ. ಈ ಪಂದ್ಯದಲ್ಲಿ ಭಾರತ ಗೆಲುವಿಗೆ ಕಾರಣವಾದ ಶ್ರೇಯಸ್ ಐಯ್ಯರ್ 46 ಎಸೆತಗಳಲ್ಲಿ 29 ರನ್‌ಗಳಿಸಿದರೆ ಆರ್ ಅಶ್ವಿನ್ 62 ಎಸೆತಗಳಲ್ಲಿ 46 ರನ್‌ಗಳಿಸಿದರು. ಈ ಮೂಲಕ ರೋಚಕ ಗೆಲುವಿಗೆ ಕಾರಣವಾಗಿದ್ದಾರೆ.

ಇಲ್ಲಿ ಮಾಡಿದ ತಪ್ಪು ತಿದ್ದಿಕೊಳ್ಳುತ್ತೇವೆ
ಈ ಪಂದ್ಯದಲ್ಲಿ ನಾವು ತಪ್ಪುಗಳನ್ನು ಮಾಡಿದ್ದು ಇದರಿಂದ ಪಾಠಗಳನ್ನು ಕಲಿಯಲು ಬಯಸುತ್ತೇವೆ. ಭವಿಷ್ಯದಲ್ಲಿ ಇಂಥಾ ಪರಿಸ್ಥಿತಿಗಳು ಬಂದಾಗ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲಿದ್ದೇವೆ. ಇನ್ನು ಕಳೆದ ಆರೇಳು ವರ್ಷಗಳಲ್ಲಿ ನಮ್ಮ ಬೌಲಿಂಗ್ ವಿಭಾಗದ ಸಾಮರ್ಥ್ಯ ನೋಡಿದಾಗ ಹರ್ಷವಾಗುತ್ತದೆ"ಎಂದಿದ್ದಾರೆ ಕೆಎಲ್ ರಾಹುಲ್. ಇನ್ನು ಇದೇ ಸಂದರ್ಭದಲ್ಲಿ ಅವರು ಜಯ್‌ದೇವ್ ಉನಾದ್ಕಟ್ ಬೌಲಿಂಗ್ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications