
ಕನ್ನಡಿಗ ಕೆಎಲ್ ರಾಹುಲ್ ಪ್ರತಿ ಬಾರಿ ಶತಕ ಬಾರಿಸಿದ ಬಳಿಕ ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಶತಕದ ಬಳಿಕ ಕಣ್ಣು ಮತ್ತು ಕಿವಿಯನ್ನು ಮುಚ್ಚುವ ಮೂಲಕ ವಿಭಿನ್ನವಾದ ರೀತಿಯಲ್ಲಿ ಕೆಎಲ್ ರಾಹುಲ್ ಅವರು ತಮ್ಮ ಶತಕದ ಸಂಭ್ರಮಾಚರಣೆ ಮಾಡುತ್ತಾರೆ.
ಶುಕ್ರವಾರ (ಮಾರ್ಚ್ 26) ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಶತಕ ಬಾರಿಸುವ ಮೂಲಕ ಮರಳಿ ಲಯ ಕಂಡುಕೊಂಡಿದ್ದಾರೆ. 114 ಎಸೆತಗಳಲ್ಲಿ 108 ರನ್ ಬಾರಿಸಿದ ಕೆಎಲ್ ರಾಹುಲ್ ಅವರು ಟೀಮ್ ಇಂಡಿಯಾ ಬೃಹತ್ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯ 4 ಪಂದ್ಯಗಳಲ್ಲಿ 2 ಡಕ್ ಔಟ್ ಸೇರಿದಂತೆ ಕೇವಲ 15 ರನ್ ಗಳಿಸಿ ಟೀಕೆಗಳಿಗೆ ಒಳಗಾಗಿದ್ದ ಕೆ ಎಲ್ ರಾಹುಲ್ ಕಮ್ ಬ್ಯಾಕ್ ಮಾಡಿದ್ದಾರೆ.
ಈ ಶತಕದ ಬಳಿಕ ಮಾತನಾಡಿದ ಕೆಎಲ್ ರಾಹುಲ್ ತಮ್ಮ ಶತಕದ ವಿಭಿನ್ನ ಸಂಭ್ರಮಾಚರಣೆಯ ಅರ್ಥವನ್ನು ಬಿಚ್ಚಿಟ್ಟಿದ್ದಾರೆ. ನಾವು ಹಲವಾರು ಟೀಕೆಗಳನ್ನು, ಕೊಂಕು ಮಾತಾಡುವವರನ್ನು ಮತ್ತು ಕಾಲೆಳೆಯುವವರನ್ನು ನೋಡಿರುತ್ತೇವೆ. ಅಂತಹ ಅನಗತ್ಯ ಕಿರಿಕಿರಿಗಳಿಂದ ದೂರ ಇದ್ದು ಶಾಂತವಾಗಿ ಇರುವುದಕ್ಕೆ ಕಣ್ಣು ಮತ್ತು ಕಿವಿ ಮುಚ್ಚುವುದಾಗಿ ರಾಹುಲ್ ತಿಳಿಸಿದ್ದಾರೆ. ನಮ್ಮ ಬಗ್ಗೆ ಮಾತನಾಡುವವರನ್ನು ನಾವು ತಡೆಯಲಾಗುವುದಿಲ್ಲ , ಆದರೆ ಅಂಥವರನ್ನು ತಿರಸ್ಕರಿಸಿ ನಾವು ಶಾಂತಿಯಿಂದ ಇರಬಹುದು ಎಂಬುದು ಕೆ ಎಲ್ ರಾಹುಲ್ ಅವರ ಅಭಿಪ್ರಾಯ.
ಹೀಗಾಗಿ ಟ್ರೋಲ್ ಮಾಡುವವರು , ಟೀಕೆ ಮಾಡುವವರು ಮತ್ತು ಕಾಲು ಎಳೆಯುವವರನ್ನು ತಿರಸ್ಕರಿಸುವೆ ಎಂಬುದನ್ನು ಕೆ ಎಲ್ ರಾಹುಲ್ ಕಣ್ಣು ಮತ್ತು ಕಿವಿ ಮುಚ್ಚುವುದರ ಮೂಲಕ ವ್ಯಕ್ತಪಡಿಸಿದ್ದಾರೆ.