ಇಂಗ್ಲೆಂಡ್‌ನ ತಂಡ ಭಾರತ ಪ್ರವಾಸಕ್ಕೆ ಬರಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯು ಜನವರಿ 22 ರಿಂದ ಆರಂಭವಾಗಲಿದ್ದು, ಫೆಬ್ರವರಿ 2 ರವರೆಗೆ ನಡೆಯಲಿದೆ. ಟಿ20 ಸರಣಿಯ ಬಳಿಕ ಉಭಯ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿಯೂ ನಡೆಯಲಿದೆ. ಇಂಗ್ಲೆಂಡ್ ವಿರುದ್ಧದ ವೈಟ್ ಬಾಲ್ ಸರಣಿಯಿಂದ ಭಾರತ ತಂಡ ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಳ ನಂತರ ಫೆಬ್ರವರಿ 19 ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಪ್ರಾರಂಭವಾಗಲಿದೆ. ಈ ಮೆಗಾ ಟೂರ್ನಿಯಲ್ಲಿ ಭಾರತ ತಂಡ ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಹೀಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಯ್ಕೆ ಸಮಿತಿ ಬಲಿಷ್ಠ ಟೀಮ್ ಇಂಡಿಯಾ ಕಟ್ಟಲು ಯೋಜನೆ ರೂಪಿಸಿದೆ. ಇಂತಹ ಸಂದರ್ಭದಲ್ಲಿ ಇಂಗ್ಲೆಂಡ್ ಸರಣಿಯಿಂದ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ.

ವರದಿಗಳ ಪ್ರಕಾರ, ಚಾಂಪಿಯನ್ಸ್ ಟ್ರೋಫಿಗೆ ಕೆಎಲ್ ರಾಹುಲ್ ಆಯ್ಕೆಯಾಗಲಿದ್ದಾರೆ. ಅವರು ಇಂಗ್ಲೆಂಡ್ ಸರಣಿಯಿಂದ ವಿರಾಮ ಕೇಳಿದ್ದಾರೆ, ಆದರೆ ಅವರು ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಗೆ ಲಭ್ಯವಿರುತ್ತಾರೆ ಎಂದು ಬಿಸಿಸಿಐ ಮೂಲ ತಿಳಿಸಿದೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಉಳಿದ ಪಂದ್ಯಗಳು ಆತಿಥೇಯ ಪಾಕಿಸ್ತಾನದಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ನಿರಾಶಾದಾಯಕ ಪ್ರದರ್ಶನ ನೀಡಿದರು. ಆದರೆ ರನ್ ಗಳಿಸಿದ ಕೆಲವೇ ಬ್ಯಾಟರ್‌ಗಳಲ್ಲಿ ರಾಹುಲ್ ಒಬ್ಬರು. ಅವರು 10 ಇನ್ನಿಂಗ್ಸ್‌ಗಳಲ್ಲಿ 30.66 ಸರಾಸರಿಯಲ್ಲಿ 276 ರನ್ ಗಳಿಸುವ ಮೂಲಕ ಭಾರತದ ಪರ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಇದೀಗ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆಯಲು ಕೆಎಲ್ ರಾಹುಲ್ ವಿಕೆಟ್‌ಕೀಪರ್- ಬ್ಯಾಟರ್‌ಗಳಾದ ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅವರೊಂದಿಗೆ ಪೈಪೋಟಿ ನಡೆಸಬೇಕಾಗಿದೆ.
ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕ ಯಾರಾಗಲಿದ್ದಾರೆ ಎಂಬ ಸಸ್ಪೆನ್ಸ್ ಇದೆ. ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಅವರು ನಾಯಕರಾಗಿದ್ದರೂ ಕಳಪೆ ಫಾರ್ಮ್‌ನಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಬೇಕಾಯಿತು.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡದ ನಾಯಕರಾಗಿದ್ದಾರೆ. ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಅರ್ಷದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ ಅವರಂತಹ ಆಟಗಾರರು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಜನವರಿ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯ ಎರಡನೇ ಟಿ20 ಪಂದ್ಯ ಜನವರಿ 25 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರನೇ ಟಿ20 ಪಂದ್ಯ ರಾಜ್‌ಕೋಟ್‌ನಲ್ಲಿ, ನಾಲ್ಕನೇ ಟಿ20 ಪಂದ್ಯ ಪುಣೆಯಲ್ಲಿ ಮತ್ತು ಐದನೇ ಟಿ20 ಪಂದ್ಯ ಮುಂಬೈನಲ್ಲಿ ನಡೆಯಲಿದೆ.
ಟಿ20 ಸರಣಿ ಬಳಿಕ ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ ನಡೆಯಲಿದೆ. ಉಭಯ ತಂಡಗಳು ಈ ಸರಣಿಯಲ್ಲಿ ಫೆಬ್ರವರಿ 6 ರಿಂದ ಫೆಬ್ರವರಿ 12 ರವರೆಗೆ ಮುಖಾಮುಖಿಯಾಗಲಿವೆ. ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಫೆಬ್ರವರಿ 6 ರಂದು ನಾಗ್ಪುರದಲ್ಲಿ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಫೆಬ್ರವರಿ 9 ರಂದು ಕಟಕ್‌ನಲ್ಲಿ ನಡೆಯಲಿದೆ. ಉಭಯ ದೇಶಗಳ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಫೆಬ್ರವರಿ 12 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.