ಮುಂಬೈ: ಭರವಸೆಯ ಆಟಗಾರ ಕೆಎಲ್ ರಾಹುಲ್ ಅವರು ಬಾರಿಸಿದ ಭರ್ಜರಿ ಶತಕದ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಾಖಲೆಯ ಚಾಂಪಿಯನ್ ಮುಂಬೈ ತಂಡವನ್ನು ಮಣಿಸಿ, ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದಿದೆ. ಎಂಟರ ಘಟ್ಟದ ಪಂದ್ಯದಲ್ಲಿ ಕರ್ನಾಟಕ 4 ವಿಕೆಟ್‌ಗಳಿಂದ ಮುಂಬೈ ತಂಡವನ್ನು ಮಣಿಸಿದೆ.
ಒತ್ತಡದ ಸನ್ನಿವೇಶದಲ್ಲಿ ಹೇಗೆ ಆಡಬೇಕು ಎಂಬುದನ್ನು ಕರಗತ ಮಾಡಿಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್ ಸಮಯೋಚಿತ ಇನಿಂಗ್ಸ್ ಕಟ್ಟಿದರು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದರು. ಮೊದಲಾವಧಿಯಲ್ಲಿ ಕೆಟ್ಟ ಎಸೆತಗಳನ್ನು ಮಾತ್ರ ದಂಡಿಸಿದ ರಾಹುಲ್ ನೆಲಕಚ್ಚಿ ನಿಂತು ಬ್ಯಾಟ್ ಮಾಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ರಾಹುಲ್ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಿದರು.

ಆರಂಭದಲ್ಲಿ ಕರುಣ್ ನಾಯರ್ (13) ಅವರ ವಿಕೆಟ್ ಕಳೆದುಕೊಂಡರೂ ಕರ್ನಾಟಕ ತಂಡದ ಮೇಲೆ ಒತ್ತಡ ಬೀಳದಂತೆ ನೋಡಿಕೊಂಡು ಬ್ಯಾಟ್ ಮಾಡಿದರು. ಯುವ ಆಟಗಾರ ರವಿಚಂದ್ರನ್ ಸ್ಮರಣ್ ಅವರ ಜೊತೆಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದ ರಾಹುಲ್ ಪಂದ್ಯ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಹುಲ್ ತಮ್ಮ ಕಲಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಬಾರಿಸಿ ತಂಡಕ್ಕೆ ಗೆಲುವಿನ ಹಾರ ತೊಡಿಸಲು ನೆರವಾದರು.
ಕೆಎಲ್ ರಾಹುಲ್ ಎರಡನೇ ಇನಿಂಗ್ಸ್‌ನಲ್ಲಿ 182 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸಹಾಯದಿಂದ 130 ರನ್ ಬಾರಿಸಿ ಮುನ್ನುಗುತ್ತಿದ್ದಾಗ ತುಷಾರ್ ದೇಶಪಾಂಡೆ ಎಸೆತದಲ್ಲಿ ಜೈಸ್ವಾಲ್‌ಗೆ ಕ್ಯಾಚ್ ನೀಡಿದರು. ಇವರು ಔಟ್ ಆಗುವ ಮುನ್ನ ಸ್ಮರಣ್ ಅವರೊಂದಿಗೆ ಮೂರನೇ ವಿಕೆಟ್‌ಗೆ 147 ರನ್‌ಗಳ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಭೋಜನ ವಿರಾಮದ ಬಳಿಕ ಮುಂದುವರಿದ ಆಟದಲ್ಲಿ ರಾಹುಲ್ ತಮ್ಮ ವಿಕೆಟ್ ಒಪ್ಪಿಸಿದರು.ಇವರು ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನದಲ್ಲಿ 24ನೇ ಶತಕವನ್ನು ಬಾರಿಸಿ ಮಿಂಚಿದರು.
ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರ್ ಸ್ಮರಣ್ ಆಕರ್ಷಕ ಬ್ಯಾಟಿಂಗ್ ನಡೆಸಿದರು. ಇವರು 123 ಎಸೆತಗಳಲ್ಲಿ 11 ಬೌಂಡರಿ ನೆರವಿನಿಂದ ಅಜೇಯ 83 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ರಾಹುಲ್ ಔಟ್ ಆದ ಬಳಿಕ ಒಂದು ಬದಿಯಲ್ಲಿ ಪಟಪಟನೇ ವಿಕೆಟ್‌ಗಳು ಬೀಳುತ್ತಾ ಇದ್ದರೂ ಸಹ ಸಮಯೋಚಿತ ಬ್ಯಾಟಿಂಗ್ ನಡೆಸಿದ ಸ್ಮರಣ್, ಮುಂಬೈ ಬೌಲರ್‌ಗಳನ್ನು ಕಾಡಿದರು.
ಒಂದು ಹಂತದಲ್ಲಿ ಶ್ರೇಯಸ್ ಗೋಪಾಲ್ (1), ಕೃತಿಕ್ ಕೃಷ್ಣ (2) ರನ್ ಬಾರಿಸುವಲ್ಲಿ ವಿಫಲರಾದಗ ಕರ್ನಾಟಕ ಒತ್ತಡದಲ್ಲಿತ್ತು. ಆಗ ಸ್ಮರಣ್ ತಮ್ಮ ಅನುಭವದ ಲಾಭ ಪಡೆದ ಬ್ಯಾಟಿಂಗ್ ಮಾಡಿ, ವಿದ್ಯಾಧರ್ ಪಾಟೀಲ್ ಅವರೊಂದಿಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ವಿದ್ಯಾಧರ್ ಪಾಟೀಲ್ ಸಹ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿ ಅಜೇಯ 31 ರನ್ ಸಿಡಿಸಿ ಗೆಲುವಿನಲ್ಲಿ ತಮ್ಮ ಕಾಣಿಕೆ ನೀಡಿದರು.
ಪಂದ್ಯ ಶ್ರೇಷ್ಠ: ಮಹತ್ವದ ಸಮಯದಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನಿಡಿದ ಅನುಭವಿ ಆಟಗಾರ ಕೆಎಲ್ ರಾಹುಲ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮುಂಬೈ ಮೊದಲ ಇನಿಂಗ್ಸ್ 120
ಕರ್ನಟಕ ಮೊದಲ ಇನಿಂಗ್ಸ್ 173
ಮುಂಬೈ ಎರಡನೇ ಇನಿಂಗ್ಸ್ 377
ಕರ್ನಾಟಕ ಎರಡನೇ ಇನಿಂಗ್ಸ್ 6 ವಿಕೆಟ್‌ಗೆ 325