ರಾಜ್‌ಕೋಟ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಏಕದಿನ ಪಂದ್ಯ ಬುಧವಾರ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಈ ವೇಳೆ ಟೀಮ್ ಇಂಡಿಯಾದ ಭರವಸೆಯ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದರು. ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಾಹುಲ್ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದರು. ಇವರ ಮನಮೋಹಕ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 284 ರನ್ ಸೇರಿಸಿದೆ.
ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ (24) ಬೇಗನೇ ಪೆವಿಲಿಯನ್ ಸೇರಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ಇವರು ಸತತ ಐದು ಅರ್ಧಶತಕ ಬಾರಿಸಿದ್ದರಿಂದ ಇವರ ಮೇಲೆ ಭರವಸೆ ಹೆಚ್ಚಿತ್ತು. ಆದರೆ ಬುಧವಾರದ ಪಂದ್ಯದಲ್ಲಿ ವಿರಾಟ್ 23 ರನ್‌ಗಳಿಗೆ ಆಟ ಮುಗಿಸಿದರು. ಶ್ರೇಯಸ್ ಅಯ್ಯರ್ ಬಂದು ಹೋಗುವ ಸಂಪ್ರದಾಯ ಮುಗಿಸಿದರು. ಆಲ್‌ರೌಂಡರ್ ರವೀಂದ್ರ ಜಡೇಜಾ 44 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ 27 ರನ್ ಬಾರಿಸಿದರು. ಅಲ್ಲದೆ ರಾಹುಲ್‌ಗೆ ಉತ್ತಮ ಸಾಥ್ ನೀಡಿದರು. 5ನೇ ವಿಕೆಟ್‌ಗೆ ರಾಹುಲ್ ಹಾಗೂ ಜಡೇಜಾ 88 ಎಸೆತಗಳಲ್ಲಿ 73 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು.

ಆರನೇ ವಿಕೆಟ್‌ಗೆ ನಿತೀಶ್ ಕುಮಾರ್ ರೆಡ್ಡಿ ರಾಹುಲ್ ಅವರನ್ನು ಸೇರಿಕೊಂಡು ಕ್ಲಾಸ್ ಇನಿಂಗ್ಸ್ ಕಟ್ಟಿದರು. ಅಲ್ಲದೆ ಆರನೇ ವಿಕೆಟ್‌ಗೆ ಅರ್ಧಶತಕ ಜೊತೆಯಾಟವನ್ನು ನೀಡಿದರು. ಈ ಹಂತದಲ್ಲಿ ನಿತೀಶ್ ಕುಮಾರ್ ರೆಡ್ಡಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಕೆಎಲ್ ರಾಹುಲ್ ತಮ್ಮ ಬ್ಯಾಟಿಂಗ್ ಕಲೆಯ ಪ್ರದರ್ಶನ ಮಾಡಿದರು. ಏಕದಿನ ಕ್ರಿಕೆಟ್‌ನಲ್ಲಿ ರಾಹುಲ್ 794 ದಿನಗಳ ಬಳಿಕ ಮೂರಂಕಿ ಮುಟ್ಟಿ ಸಂಭ್ರಮಿಸಿದರು. ಒತ್ತಡವನ್ನು ಮೆಟ್ಟಿನಿಂತು ಇನಿಂಗ್ಸ್ ಕಟ್ಟಿದ ರಾಹುಲ್ ಭಾರತ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ದೊಡ್ಡ ಪಾತ್ರ ನಿರ್ವಹಿಸಿದರು. ಇವರು 92 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 112 ರನ್ ಸಿಡಿಸಿದರು.