ಸುಮಾರು 30 ವರ್ಷಗಳ ನಂತರ ಪಾಕಿಸ್ತಾನ ತನ್ನ ಮೊದಲ ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿದೆ. 1996 ರಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಕೆಲವು ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಿತ್ತು. ಇದೀಗ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಸಜ್ಜಾಗಿದೆ. ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾದ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಇದಕ್ಕೂ ಮೊದಲು, ಟೀಮ್ ಇಂಡಿಯಾದ ಯಾವ ಬ್ಯಾಟರ್‌ಗೆ ಯಾವ ಜವಾಬ್ದಾರಿ ಸಿಗುತ್ತದೆ ಎಂಬುದು ಅಭ್ಯಾಸದಿಂದಲೇ ಸ್ಪಷ್ಟವಾಗಿದೆ.
ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಮುನ್ನ ಸೋಮವಾರ ನಡೆದ ಭಾರತ ತಂಡದ ಎರಡನೇ ಅಭ್ಯಾಸ ಅವಧಿಯಲ್ಲಿ ಕೆಲವು ಆಟಗಾರರಿಗೆ ಸಿಕ್ಕಿರುವ ಜವಾಬ್ದಾರಿ ತಿಳಿದು ಬಂದಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಫಿನಿಷರ್ ಪಾತ್ರಕ್ಕೆ ಸಜ್ಜಾಗುತ್ತಿದ್ದಾರೆ.

ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ಆಕ್ರಮಣಕಾರಿಯಾಗಿ ಕಾಣುತ್ತಿದ್ದರು. ಪ್ರಾಯೋಗಿಕವಾಗಿ, ರಾಹುಲ್ ಫಿನಿಶರ್ ಪಾತ್ರವ ಪ್ಲೇ ಮಾಡಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 29 ಎಸೆತಗಳಲ್ಲಿ 40 ರನ್ ಗಳಿಸಿದ ರಾಹುಲ್, ಬಹುತೇಕ ಪ್ರತಿಯೊಂದು ಎಸೆತದಲ್ಲೂ ಸಿಕ್ಸರ್ ಬಾರಿಸುವುದನ್ನು ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಐದು ಅಥವಾ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿರುವ ರಾಹುಲ್, ಅಂತಿಮ ಓವರ್‌ಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಸ್ಪೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಕೆಎಲ್ ರಾಹುಲ್ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಆರಂಭದಿಂದಲೇ ವೇಗವಾಗಿ ಇನ್ನಿಂಗ್ಸ್ ಕಟ್ಟುವ ರಾಹುಲ್ ಪಂದ್ಯದ ಗತಿಯನ್ನು ಬದಲಾಯಿಸಬಲ್ಲರು. ಹೀಗಾಗಿ ಮಹತ್ವದ ಟೂರ್ನಿಯಲ್ಲಿ ರಾಹುಲ್ ಅವರಿಗೆ ಮ್ಯಾನೇಜ್ಮೆಂಟ್ ವಿಶೇಷ ಪಾತ್ರ ನಿರ್ವಹಿಸಲು ಅವಕಾಶ ನೀಡಿದೆ ಎಂದು ವರದಿಗಳಾಗಿವೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮೂರು ಪಂದ್ಯಗಳಲ್ಲಿ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ 87, 60 ಮತ್ತು 112 ರನ್ ಗಳಿಸಿದ್ದರು. ಈ ಅದ್ಭುತ ಪ್ರದರ್ಶನಕ್ಕೆ ಅವರಿಗೆ ಸರಣಿಯ ಆಟಗಾರ ಪ್ರಶಸ್ತಿ ಸಿಕ್ಕಿತ್ತು. ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 119 ರನ್ ಗಳ ಅದ್ಭುತ ಇನ್ನಿಂಗ್ಸ್ ಮೂಲಕ ಫಾರ್ಮ್ ಗೆ ಮರಳಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಉತ್ತಮ ಲಯದಲ್ಲಿ
ಕಾಣಿಸಿಕೊಂಡಿದ್ದಾರೆ. ಅವರು ತಡವಾಗಿ ಕಟ್ ಮತ್ತು ಟಚ್ ಶಾಟ್ ಅನ್ನು ಅಭ್ಯಾಸ ಮಾಡುತ್ತಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಬ್ಯಾಟ್‌ನಿಂದ ಅರ್ಧಶತಕ ದಾಖಲಾಗಿತ್ತು. ವಿರಾಟ್ ಕೊಹ್ಲಿ ಕೂಡ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಸಮಯ ಕಳೆದರು. ಅವರು ಈಗ ಆತ್ಮವಿಶ್ವಾಸದಿಂದ ಕಾಣುತ್ತಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಅಬ್ಬರಿಸಲಿದ್ದಾರೆ. ಫೆಬ್ರವರಿ 20 ರಂದು ವಿರಾಟ್ ಕೊಹ್ಲಿ ಹೇಗೆ ಬ್ಯಾಟಿಂಗ್ ಮಾಡುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.