
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಟೀಮ್ ಇಂಡಿಯಾ 2-1ರ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಈ ವರ್ಷದ ಅಂತಿಮ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಚುಟುಕು ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕನಾಗಿರುವ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದು ಶ್ರೇಯಾಂಕ ಪಟ್ಟಿಯಲ್ಲಿ ಮತ್ತಷ್ಟು ಉತ್ತಮ ಸ್ಥಾನ ಪಡೆದುಕೊಂಡಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗು ಕೆಎಲ್ ರಾಹುಲ್ ಟಿ20 ರ‍್ಯಾಂಕಿಂಗ್‌ನಲ್ಲಿ ತಮ್ಮ ಸ್ಥಾನವನ್ನು ಏರಿಸಿಕೊಂಡಿದ್ದಾರೆ. ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ 85 ರನ್‌ಗಳ ಸಹಿತ ಒಟ್ಟಾರೆ ವಿರಾಟ್ ಕೊಹ್ಲಿ 134 ರನ್ ಸಿಡಿದ್ದಾರೆ. ಟಿ20ಯಲ್ಲಿ 697 ಅಂಕಗಳನ್ನು ಕೊಹ್ಲಿ ಹೊಂದಿದ್ದು ರ‍್ಯಾಂಕಿಂಗ್‌ನಲ್ಲಿ 8ನೇ ಸ್ಥಾನಕ್ಕೇರಿದ್ದಾರೆ.
ಕೆಎಲ್ ರಾಹುಲ್ ಮೂರು ಪಂದ್ಯಗಳ ಈ ಸರಣಿಯಲ್ಲಿ 81 ರನ್ ಪೇರಿಸಿದ್ದಾರೆ. ಈಗ ಅವರ ಖಾತೆಯಲ್ಲಿ 816 ಅಂಕಗಳು ಇದೆ. ಕೆಎಲ್ ರಾಹುಲ್ ಮೂರನೇ ಸ್ಥಾನಕ್ಕೇರಿದ್ದು ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಅವರನ್ನು ಐದನೇ ಸ್ಥಾನಕ್ಕೆ ತಳ್ಳಿದ್ದಾರೆ.
ಇನ್ನು ಈ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಆರಂಬಿಕ ಆಟಗಾರ ಶಿಖರ್ ಧವನ್ ಕೂಡ ಏರಿಕೆಯನ್ನು ಕಾಣಿವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಧವನ್ 19 ಸ್ಥಾನದಲ್ಲಿದ್ದಾರೆ. ಐಸಿಸಿ ಟಿ20 ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ಡೇವಿಡ್ ಮೆಲನ್ ಹಾಗೂ ಪಾಕಿಸ್ತಾನದ ನಾಯಕ ಬಾಬರ್ ಅಜಂ ಮೊದಲ ಎರಡ ಸ್ಥಾನಗಳಲ್ಲಿ ಇದ್ದಾರೆ.
ಇನ್ನು ಟಿ20 ಕ್ರಿಕೆಟ್‌ನ ಬೌಲಿಂಗ್ ಶ್ರೇಯಾಂದಲ್ಲಿ ಭಾರತೀಯ ಬೌಲರ್‌ಗಳಲ್ಲಿ ವಾಶಿಂಗ್ಟನ್ ಸುಂದರ್ ಅತಿ ಹೆಚ್ಚಿನ ರ‍್ಯಾಂಕಿಂಗ್ ಹೊಂದಿದ ಬೌಲರ್ ಎನಿಸಿದ್ದಾರೆ. 614 ಅಂಕಗಳೊಂದಿಗೆ ಸುಂದರ್ 11ನೇ ಸ್ಥಾನದಲ್ಲಿದ್ದಾರೆ. ಸರಣಿಯಲ್ಲಿ ಕೇವಲ ಎರಡು ವಿಕೆಟ್ ಕೀಳುವಲ್ಲಿ ಮಾತ್ರವೇ ಯಶಸ್ವಿಯಾದರೂ ರನ್ ನಿಯಂತ್ರಣದಲ್ಲಿ ವಾಶಿಂಗ್ಟನ್ ಸುಂದರ್ ಯಶಸ್ವಿಯಾಗಿದ್ದಾರೆ.