IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೂ ಮುನ್ನ ಕೆಎಲ್ ರಾಹುಲ್ ಅಸ್ವಸ್ಥ; ಪ್ರ್ಯಾಕ್ಟೀಸ್ ವೇಳೆ ವಾಂತಿ!
ಬಹು ಮಾದರಿಯ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತ ಕ್ರಿಕೆಟ್ ತಂಡ, ಸದ್ಯ ಟಿ20 ಸರಣಿಯನ್ನು ಆಡುತ್ತಿದೆ. ಆ ಬಳಿಕ ಡಿಸೆಂಬರ್ 17ರಿಂದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಏಕದಿನ ಸರಣಿ ವೇಳೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕರಾಗಿ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಏಕದಿನ ತಂಡದ ಕೆಲವು ಆಟಗಾರರೂ ಇನ್ನೂ ಭಾರತದಲ್ಲಿದ್ದು, ಕೆಲವೇ ದಿನಗಳಲ್ಲಿ ರೇನ್ ಬೋ ನಾಡಿಗೆ ತೆರಳಲಿದ್ದಾರೆ.

ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಸಹ ಭಾರತದಲ್ಲಿದ್ದರೂ, ಮೈದಾನದಲ್ಲಿ ಕಠಿಣ ಅಭ್ಯಾಸದ ಮೂಲಕ ಬೆವರು ಹರಿಸುತ್ತಿದ್ದಾರೆ. ಅಭ್ಯಾಸದ ವೇಳೆ ಕೆಎಲ್ ರಾಹುಲ್ ಏಕಾಏಕಿ ಅಸ್ವಸ್ಥರಾಗಿದ್ದು, ಮೈದಾನದ ಬದಿಯಲ್ಲಿ ವಾಂತಿ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನು ಸ್ವತಃ ಕೆಎಲ್ ರಾಹುಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಕನ್ನಡಿಗ ಕೆಎಲ್ ರಾಹುಲ್ ಮುಂಬರುವ ಏಕದಿನ ಸರಣಿಗೆ ತಯಾರಿ ನಡೆಸುತ್ತಿರುವುದು ಕಂಡುಬರುತ್ತದೆ.
ಮೊದಲು ರನ್ನಿಂಗ್ ಅಭ್ಯಾಸ ಮಾಡಿದ ಬಳಿಕ, ಬಾಡಿ ಸ್ಟ್ರೆಚ್ ಮಾಡಿದ್ದಾರೆ. ಈ ಸಮಯದಲ್ಲಿ ಅವರಿಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಮೈದಾನದ ಪಕ್ಕಕ್ಕೆ ಹೋಗಿ ವಾಂತಿ ಮಾಡಿಕೊಂಡಿದ್ದಾರೆ. ನಂತರ ಕೆಎಲ್ ರಾಹುಲ್ ಸ್ವಲ್ಪ ನಿರಾಳರಾಗಿದ್ದಾರೆ.
ಕೆಎಲ್ ರಾಹುಲ್ ಆರೋಗ್ಯ ಸಹಜವಾಗಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ. ವಿಡಿಯೋದ ಕೊನೆಯಲ್ಲಿ ಅವರು ಗುಣಮುಖರಾದಂತೆ ಕಾಣುತ್ತಿದೆ. ಇದೇ ವೇಳೆ ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸಹ ಅಭ್ಯಾಸದಲ್ಲಿ ತೊಡಗಿಕೊಂಡರು. ಈ ವಿಡಿಯೋದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ನಡುವೆ ಸಂಭಾಷಣೆ ಕೂಡ ನಡೆದಿದೆ. ಒಂದೆರಡು ದಿನಗಳಲ್ಲಿ ಭಾರತ ಏಕದಿನ ತಂಡದ ಉಳಿದ ಸದಸ್ಯರು ದಕ್ಷಿಣ ಆಫ್ರಿಕಾಗೆ ಹಾರಲಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್ ನಾಯಕತ್ವ ಅಂಕಿಅಂಶ
ಕರ್ನಾಟಕ ಬ್ಯಾಟರ್ ಕೆಎಲ್ ರಾಹುಲ್ ಇದುವರೆಗೆ ಒಂಬತ್ತು ಏಕದಿನ ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದು, ಈ ಪೈಕಿ ಭಾರತ ಆರು ಪಂದ್ಯಗಳಲ್ಲಿ ಗೆದ್ದು, ಮೂರು ಪಂದ್ಯಗಳಲ್ಲಿ ಸೋತಿದೆ.
2022ರಲ್ಲಿ ಭಾರತ ತಂಡ ಹರಿಣಗಳ ನಾಡು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಆಗ ಕೆಎಲ್ ರಾಹುಲ್ ತಂಡದ ನಾಯಕರಾಗಿದ್ದರು. ಈ ಸಂದರ್ಭದಲ್ಲಿ ಭಾರತ ಸೋಲನುಭವಿಸಿತ್ತು. ಈ ಬಾರಿಯೂ ಕೆಎಲ್ ರಾಹುಲ್ ನಾಯಕರಾಗಿದ್ದು, ಕಳೆದ ಬಾರಿಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications