ವಿಕೆಟ್ ಕೀಪರ್ ಕೆಎಲ್ ಶ್ರೀಜಿತ್ ಹಾಗೂ ಅಭಿಲಾಷ್ ಶೆಟ್ಟಿ ಅವರ ಭರ್ಜರಿ ಪ್ರದರ್ಶನದ ನೆರವಿನಿಂದ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯ "ಎ" ಗುಂಪಿನ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ತಮಿಳುನಾಡು ತಂಡವನ್ನು ಮಣಿಸಿತು. ಈ ಮೂಲಕ ಮಾಯಂಕ್ ಪಡೆ ಆಡಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.
289 ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕದ ತಂಡದ ಆರಂಭ ಕಳಪೆಯಾಗಿತ್ತು. ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಶತಕ ಬಾರಿಸಿದ್ದ ದೇವದತ್ ಪಡಿಕ್ಕಲ್ ತಮಿಳುನಾಡು ವಿರುದ್ಧ ಸ್ಥಿರ ಪ್ರದರ್ಶನ ನೀಡಲಿಲ್ಲ. ಇವರು 22 ರನ್‌ಗಳಿಗೆ ಆಟ ಮುಗಿಸಿದರು. ಭರವಸೆಯ ಆಟಗಾರ ಕರುಣ್ ನಾಯರ್ 17, ಆರ್ ಸ್ಮರಣ್ 15 ರನ್ ಬಾರಿಸಿ ನಿರಾಸೆ ಅನುಭವಿಸಿದರು. ನಾಯಕ ಮಯಾಂಕ್ ಅಗರ್‌ವಾಲ್ 77 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 58 ರನ್ ಸಿಡಿಸಿ ಔಟ್ ಆದರು. ಕರ್ನಾಟಕ 4 ವಿಕೆಟ್‌ಗೆ 136 ರನ್ ಕಲೆ ಹಾಕಿ ಸಂಕಷ್ಟದಲ್ಲಿತ್ತು.

5ನೇ ವಿಕೆಟ್‌ಗೆ ವಿಕೆಟ್ ಕೀಪರ್ ಕೆಎಲ್ ಶ್ರೀಜಿತ್ ಹಾಗೂ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಈ ಜೋಡಿ 99 ಎಸೆತಗಳಲ್ಲಿ 116 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಕೆಎಲ್ ಶ್ರೀಜಿತ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 77 ರನ್ ಬಾರಿಸಿ ಔಟ್ ಆದರು. ಆಲ್‌ರೌಂಡರ್ ಶ್ರೇಯಸ್ ಗೋಪಾಲ್ 6 ಬೌಂಡರಿ ಸಹಾಯದಿಂದ 55 ರನ್ ಬಾರಿಸಿದರು. ಅಭಿನವ್ ಮನೋಹರ್ ಅಜೇಯ 20, ವಿದ್ಯಾಧರ್ ಪಟೇಲ್ ಅಜೇಯ 17 ರನ್ ಬಾರಿಸಿ ತಂಡದ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಕರ್ನಾಟಕ 47.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 293 ರನ್ ಸೇರಿಸಿ ಜಯ ಸಾಧಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ತಮಿಳುನಾಡು ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕ ಎಸ್.ಆರ್. ಅತೀಶ್ (14) ಹಾಗೂ ನಾಯಕ ಎನ್. ಜಗದೀಶನ್ ಜೋಡಿ ಮೊದಲ ವಿಕೆಟ್‌ಗೆ 66 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಸಮಯೋಚಿತ ಬ್ಯಾಟಿಂಗ್ ನಡೆಸುತ್ತಿದ್ದ ನಾಯಕ ಜಗದೀಶನ್ 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ 65 ರನ್ ಸಿಡಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಪ್ರದೋಷ್ ರಂಜನ್ ಪಾಲ್ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಇವರು 64 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 57 ರನ್ ಸಿಡಿಸಿದರು. ಉಳಿದಂತೆ ಬಾಬಾ ಇಂದ್ರಜೀತ್ 28, ಮೊಹಮ್ಮದ್ ಅಲಿ 31, ಆರ್ ಸಾಯಿ ಕಿಶೋರ್ 38 ರನ್ ಕಲೆ ಹಾಕಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ತಮಿಳುನಾಡು 49.5 ಓವರ್‌ಗಳಲ್ಲಿ 288 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕದ ಪರ ಅಭಿಲಾಷ್ ಶೆಟ್ಟಿ 4, ವಿದ್ಯಾಧರ್ ಪಾಟೀಲ್, ಶ್ರೀಶ್ ಆಚರ್ ತಲಾ 2 ವಿಕೆಟ್ ಕಬಳಿಸಿದರು.