
ಮೈಸೂರು, ಆಗಸ್ಟ್ 28: ಶಿವಮೊಗ್ಗ ಲಯನ್ಸ್ ಮತ್ತು ಬಿಜಾಪುರ್ ಬುಲ್ಸ್ ನಡುವಣ ಕರ್ನಾಟಕ ಪ್ರೀಮಿಯರ್ ಲೀಗ್ 21ನೇ ಪಂದ್ಯದಲ್ಲಿ ಬಿಜಾಪುರ್ ಬುಲ್ಸ್ 17 ರನ್ ಜಯ ಗಳಿಸಿದೆ. ಆದರೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದ ಶಿವಮೊಗ್ಗ ಲಯನ್ಸ್ ಪಂದ್ಯಗಳ ಗೆಲುವಿನ ಸಂಖ್ಯೆಯ (3) ಆಧಾರದಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಿಜಾಪುರ್ ಬುಲ್ಸ್ ತಂಡ ರಾಜು ಭಟ್ಕಳ್ 66, ನವೀನ್ ಎಂಜಿ 68, ಸುನಿಲ್ ರಾಜು 36 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 195 ರನ್ ಗಳಿಸಿತು. ಬುಲ್ಸ್ ಇನ್ನಿಂಗ್ಸ್‌ನಲ್ಲಿ ರಿಷಬ್ ಸಿಂಗ್ 2 ವಿಕೆಟ್ ಪಡೆದರು.
ಗರಿಷ್ಠ ರನ್ ಗುರಿ ಬೆಂಬತ್ತಿದ ಶಿವಮೊಗ್ಗ ಲಯನ್ಸ್‌ಗೆ ಆರಂಭಿಕ ಬ್ಯಾಟ್ಸ್ಮನ್ ಅರ್ಜುನ್ ಹೊಯ್ಸಳ 69, ನಿಹಾಲ್ ಉಲ್ಲಾಳ್ 18, ಅಕ್ಷಯ್ ಬಲ್ಲಾಳ್ 22, ನಿದೀಶ್ ಎಂ ಅಜೇಯ 44 ರನ್ ಸೇರಿಸಿಯೂ ತಂಡ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 178 ರನ್ ಗಳಿಸಲಷ್ಟೇ ಶಕ್ತವಾಯ್ತು.
ಬುಜಾಪುರ್-ಶಿವಮೊಗ್ಗ ನಡುವಿನ ಈ ಪಂದ್ಯ ಲೀಗ್ ಹಂತದ ಕೊನೇ ಪಂದ್ಯವಾಗಿತ್ತು. ಅಂತೂ ಲೀಗ್ ಕೊನೇ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಬಳ್ಳಾರಿ ಟಸ್ಕರ್ಸ್, ಬೆಳಗಾವಿ ಪ್ಯಾಂಥರ್ಸ್ ಮತ್ತು ಹುಬ್ಳಿ ಟೈಗರ್ಸ್ ಮೊದಲ ಮೂರು ಸ್ಥಾನಗಳಲ್ಲಿದ್ದು, ಈ ಮೂರೂ ಪ್ಲೇ ಆಫ್ ಪ್ರವೇಶಿಸಿವೆ.
4ನೇ ಸ್ಥಾನಿ ಶಿವಮೊಗ್ಗ -0.836, 5ನೇ ಸ್ಥಾನಿ ಮೈಸೂರು -0.323 ನೆಟ್ ರನ್ ರೇಟ್ ಹೊಂದಿದ್ದವು. ಆದರೆ ಲೀಗ್‌ನಲ್ಲಿ ಪಂದ್ಯಗಳ ಗೆಲುವನ್ನು ಆಧರಿಸಿ ಶಿವಮೊಗ್ಗ ಲಯನ್ಸ್ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಪ್ಲೇ ಆಫ್ ಪಂದ್ಯಗಳು ಆಗಸ್ಟ್ 28ರಿಂದ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಬಳ್ಳಾರಿ-ಬೆಳಗಾವಿ, ಆಗಸ್ಟ್ 29ರ ಎಲಿಮಿನೇಟರ್‌ನಲ್ಲಿ ಹುಬ್ಳಿ ಮತ್ತು ಶಿವಮೊಗ್ಗ ಮುಖಾಮುಖಿಯಾಗಲಿವೆ.