ಕಳೆದ ಏಳು ತಿಂಗಳಿನಿಂದ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ಸರಣಿಯನ್ನು ಆಡುವ ಮೂಲಕ ಅಂಗಳಕ್ಕೆ ಕಂ ಬ್ಯಾಕ್ ಮಾಡಿದ್ದಾರೆ. ಆದರೆ ಅಸೀಸ್ ನೆಲದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ, ವಿರಾಟ್ ಸೊನ್ನೆ ಸುತ್ತಿದ್ದರು. ಈಗ ಇವರ ಚಿತ್ತ ಆಡಿಲೇಡ್ ಅಂಗಳದತ್ತ ನೆಟ್ಟಿದೆ. ಇದು ವಿರಾಟ್ ಕೊಹ್ಲಿ ಅವರ ಪಾಲಿಗೆ ನೆಚ್ಚಿನ ಅಂಗಳವಾಗಿದೆ. ಈ ಮೈದಾನದಲ್ಲಿ ವಿರಾಟ್ ಅಬ್ಬರಿಸುವ ಮೂಲಕ ಎರಡು ದಾಖಲೆಯನ್ನು ನಿರ್ಮಿಸುವ ಕನಸಿನಲ್ಲಿದ್ದಾರೆ.
ಪರ್ತ್‌ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ವಿರಾಟ್, ಆಡಿಲೇಡ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಅಷ್ಟಕ್ಕೂ ವಿರಾಟ್ ಅವರಿಗೆ ಆಡಿಲೇಡ್ ಅಂಗಳ ನೆಚ್ಚಿನ ಅಂಗಳವಾಗಿದೆ. ಈ ಮೈದಾನದಲ್ಲಿ ಇವರ ದಾಖಲೆ ಅಮೋಘವಾಗಿದೆ. ವಿರಾಟ್ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸುವಲ್ಲಿ ಯಶಸ್ವಿಯಾದರೆ, ಅವರು ವಿಶೇಷ ದಾಖಲೆಯನ್ನು ಸ್ಥಾಪಿಸುತ್ತಾರೆ.

ಅಕ್ಟೋಬರ್ 23 ರಂದು ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯ ಆಡಿಲೇಡ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಶತಕವನ್ನು ಬಾರಿಸಿದರೆ, ಆಡಿಲೇಡ್‌ನಲ್ಲಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕವನ್ನು ದಾಖಲಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಮೈದಾನದಲ್ಲಿ ವಿರಾಟ್ 2 ಶತಕ ಸಿಡಿಸಿದ್ದಾರೆ. ಇದೇ ಮೈದಾನದಲ್ಲಿ ಇಂಗ್ಲೆಂಡ್‌ನ ಗ್ರೇಮ್ ಹಿಕ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಮಾರ್ಕ್ ವಾ ಕೂಡ ಈ ಮೈದಾನದಲ್ಲಿ ತಲಾ ಎರಡು ಶತಕ ಸಿಡಿಸಿದ್ದಾರೆ.
ಆಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವಲ್ಲಿ ಸಫಲರಾದಲ್ಲಿ ಆಸ್ಟ್ರೇಲಿಯಾದ ಒಂದೇ ಅಂಗಳದಲ್ಲಿ ಅತಿ ಹೆಚ್ಚು ಶತಕವನ್ನು ಬಾರಿಸಿದ ವಿದೇಶಿ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಲಿದ್ದಾರೆ. ಈ ಮೊದಲು ಈ ಮೈದಾನದಲ್ಲಿ ವಿರಾಟ್ ಒಟ್ಟು 5 ಶತಕಗಳನ್ನು ಬಾರಿಸಿದ್ದರು. ಗುರುವಾರ ವಿರಾಟ್, ದೊಡ್ಡ ಇನಿಂಗ್ಸ್ ಕಟ್ಟಿ ವಿಶೇಷ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಬಹುದೇ ಎಂಬ ಚರ್ಚೆಗಳು ಆರಂಭವಾಗಿವೆ.

ಇಷ್ಟೇ ಅಲ್ಲದೆ ವಿರಾಟ್ ಮತ್ತೊಂದು ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ 25 ರನ್ ಬಾರಿಸಿದ್ದೇ ಆದಲ್ಲಿ, ಆಡಿಲೇಡ್ ಮೈದಾನದಲ್ಲಿ 1000 ಅಂತಾರಾಷ್ಟ್ರೀಯ ರನ್ ಪೂರ್ಣ ಗೊಳಿಸಿದ ಬ್ಯಾಟರ್ ಆಗಲಿದ್ದಾರೆ. ಅಲ್ಲದೆ ಈ ದಾಖಲೆಯನ್ನು ಬರೆದ ಈ ಸಾಧನೆ ಮಾಡಿದ ಮೊದಲ ವಿದೇಶಿ ಬ್ಯಾಟರ್ ಎಂಬ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ವಿರಾಟ್ ಆಡಿಲೇಡ್ ಮೈದಾನದಲ್ಲಿ 17 ಇನಿಂಗ್ಸ್‌ಗಳಲ್ಲಿ 975 ರನ್‌ಗಳನ್ನು ಗಳಿಸಿದ್ದಾರೆ.