
ಮುಂಬೈ, ಜುಲೈ 28: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂ.ಎಸ್ ಧೋನಿ ಮತ್ತು ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ಒಳಗೊಂಡ ನೂತನ ತಂಡವೊಂದನ್ನು ರಚಿಸಿದರೆ. ಆದರೆ ಈ ಬಾರಿ ಕ್ರಿಕೆಟ್ ಆಡಲಿಕ್ಕಲ್ಲ. ಬದಲಿಗೆ ಕಬಡ್ಡಿ ಆಡಲು ಎಂಬುದು ವಿಶೇಷ.
ಪ್ರಸಕ್ತ ಚಾಲ್ತಿಯಲ್ಲಿರುವ ಪ್ರೊ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿಯ ಟೂರ್ನಿಯು ಮುಂಬೈಗೆ ಕಾಲಿಟ್ಟಿದ್ದು, ಮುಂಬೈ ಚರಣಕ್ಕೆ ಶನಿವಾರ ವಿರಾಟ್ ಕೊಹ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ಟಾರ್ ಸ್ಪೋಟ್ಸ್‌ಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಕೊಹ್ಲಿ, ಭಾರತೀಯ ಕ್ರಿಕೆಟಿಗರನ್ನು ಹೊಂದಿರುವ ಕಬಡ್ಡಿ ತಂಡವನ್ನು ಆಯ್ಕೆ ಮಾಡಿದ್ದಾರೆ.
ಕೊಹ್ಲಿ ಹಾಜರಾತಿನಲ್ಲಿ ಮಿಂಚಿನ ಆಟವಾಡಿದ ಆತಿಥೇಯ ಮುಂಬೈನ ಯು ಮುಂಬಾ ತಂಡ ಪುಣೇರಿ ಪಲ್ಟನ್ ತಂಡವನ್ನು 33-23 ಅಂಕಗಳಿಂದ ಬಗ್ಗುಬಡಿಯಿತು. ದಿಲ್ಲಿ ಮೂಲದ ಕ್ರಿಕೆಟಿಗ ವಿರಾಟ್ ಕೊಹ್ಲಿ, ಇತ್ತೀಚೆಗಷ್ಟೇ ತಮ್ಮ ನಿವಾಸವನ್ನು ಮುಂಬೈಗೆ ವರ್ಗಾಯಿಸಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಅವರ ಕಬಡ್ಡಿ ತಂಡದಲ್ಲಿ ಧೋನಿ ಮತ್ತು ಬುಮ್ರಾ ಹೊರತಾಗಿ, ಆಲ್‌ರೌಂಡರ್ ರವೀಂದ್ರ ಜಡೇಜಾ, ವೇಗಿ ಉಮೇಶ್ ಯಾದವ್, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಕೂಡ ಇದ್ದಾರೆ.
ಆಗಸ್ಟ್ 16ರಿಂದ ಕರ್ನಾಟಕ ಪ್ರೀಮಿಯರ್ ಲೀಗ್, ಫೈನಲ್ ಎಲ್ಲಿ ಗೊತ್ತಾ?
"ಕಬಡ್ಡಿ ಕ್ರೀಡೆಗೆ ಬಲ ಅತ್ಯಗತ್ಯ. ಹೀಗಾಗಿ ಎಂ.ಎಸ್ ಧೋನಿ, ಎವೀಂದ್ರ ಜಡೇಜಾ, ಉಮೇಶ್ ಯಾದವ್, ಉಮೇಶ್ ಬಹಳ ಶಕ್ತಿಶಾಲಿ ಅವರನ್ನ ಸೇರಿಸುತ್ತೇನೆ. ರಿಷಭ್ ಪಂತ್ ಕೂಡ ತಂಡದಲ್ಲಿ ಇರಬಲ್ಲರು. ಜಸ್‌ಪ್ರೀತ್ ಬುಮ್ರಾ ಟೋ ಟಚ್‌ಗಳನ್ನು ತಂದುಕೊಡಬಲ್ಲರು. ನಾನು ಈ ತಮಡದಲ್ಲಿ ಆಡುವುದಿಲ್ಲ. ಏಕೆಂದರೆ ಈ ಎಲ್ಲಾ ಆಟಗಾರರು ನನಗಿಂತಲೂ ಬಲಿಷ್ಠರು. ಕೊನೆಯದಾಗಿ ಕೆ.ಎಲ್ ರಾಹುಲ್ ಅವರನ್ನೂ ತಂಡದಲ್ಲಿ ಸೇರಿಸುತ್ತೇನೆ. ಇದು ನನ್ನ 7 ಆಟಗಾರರ ತಂಡ," ಎಂದು ವಿರಾಟ್ ಕೊಹ್ಲಿ ಸಂದರ್ಶನದಲ್ಲಿ ತಮ್ಮ ಕಬಡ್ಡಿ ತಂಡವನ್ನು ಹೆಸರಿಸಿದ್ದಾರೆ.
ರಾಹುಲ್ ಮತ್ತು ಅಜಯ್ ಠಾಕೂರ್‌ಗೆ ಹೋಲಿಕೆ
ಮಾಜಿ ನಾಯಕ ಎಂ.ಎಸ್ ಧೋನಿ ಜೊತೆಗೆ ವಿರಾಟ್ ಕೊಹ್ಲಿ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಧೋನಿ ಮಾರ್ಗದರ್ಶನದಲ್ಲಿ ಕೊಹ್ಲಿ ತಮ್ಮ ನಾಯಕತ್ವದ ಹೆಜ್ಜೆ ಇಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಕಬಡ್ಡಿಯಲ್ಲಿ ಕೊಹ್ಲಿ ಮತ್ತು ಧೋನಿಯನ್ನು ಹೋಲುವ ಜೋಡಿ ಯಾವುದೆಂದು ಕಿಂಗ್ ಕೊಹ್ಲಿ ವಿವರಿಸಿದ್ದಾರೆ. "ರಾಹುಲ್ ಚೌಧರಿ ಮತ್ತು ಅಜಯ್ ಠಾಕೂರ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಇಬ್ಬರು ಆಟಗಾರರು ನಾನು ಮತ್ತು ಧೋನಿಯನ್ನು ಹೋಲುತ್ತಾರೆ," ಎಂದು ಕೊಹ್ಲಿ ತಿಳಿಸಿದ್ದಾರೆ.
ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲು ಸಜ್ಜಾಗುತ್ತಿದ್ದು, ಆಗಸ್ಟ್ 3ರಂದು ಟಿ20 ಸರಣಿ ಆರಂಭವಾಗಲಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲಿವೆ. ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ನಡೆಯಲಿದೆ. ನಂತರ 2 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ನೂತನ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ನ ಭಾಗವಾಗಿ ಈ ಸರಣಿ ಆಡಲಾಗುತ್ತಿದೆ. ಮೂರೂ ಮಾದರಿಯ ಸರಣಿಗಳಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.