

ಮೈಸೂರು, ಸೆಪ್ಟೆಂಬರ್ 2: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ 20ನೇ ಪಂದ್ಯದಲ್ಲಿ ಬೆಂಗಳೂರು ಎದುರು ಆತಿಥೇಯ ಮೈಸೂರಿಗೆ ಸೋಲಾಗಿದೆ. ಪವನ್ ದೇಶಪಾಂಡೆ ಅವರ ಆಕರ್ಷಕ ಅರ್ಥಶತಕ (76) ನೆರವಿನೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್ 2 ರನ್ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಬೆಂಗಳೂರು 20 ಓವರ್ ಗಳಲ್ಲಿ 4 ವಿಕೆಟ್ ಕಳೆದು 148 ರನ್ ಪೇರಿಸಿತು. 149ರನ್ ಗುರಿ ಬೆನ್ನತ್ತಿದ ಮೈಸೂರು 20 ಓವರ್ ಗಳಲ್ಲಿ 9 ವಿಕೆಟ್ ಕಳೆದು 146 ರನ್ ಪೇರಿಸಿ ಕೇವಲ 2 ರನ್ ನಿಂದ ಎಡವಿತು. ಅಭಿಷೇಕ್ ಭಟ್, ರೋಹನ್ ರಾಜು, ಶರಣ್ ಗೌಡ, ಆನಂದ್ ದೊಡ್ಡಮನಿ ತಲಾ 2 ವಿಕೆಟ್ ಕೆಡವಿ ವಾರಿಯರ್ಸನ್ನು ಕಾಡಿದರು.
ಮೈಸೂರು ಪರ ಶ್ರೀನಿವಾಸ್ ಶರತ್ 37, ಎಸ್ ಪಿ ಮಂಜುನಾಥ್ ಅಜೇಯ 34 ರನ್ ಕೊಡುಗೆ ನೀಡಿದರಾದರೂ ಉಳಿದ ಬ್ಯಾಟ್ಸ್ಮನ್ ಗಳ ವೈಫಲ್ಯ ತಂಡವನ್ನು ಸೋಲಿನಂಚಿಗೆ ತಳ್ಳಿತು. ಒಟ್ಟು 11 ಪಾಯಿಂಟ್ ಗಳೊಂದಿಗೆ ಬೆಂಗಳೂರು ತಂಡ ಪಾಯಿಂಟ್ ಟೇಬಲ್ ನಲ್ಲಿ ಅಗ್ರ ಸ್ಥಾನಕ್ಕೆ ಗಟ್ಟಿಯಾಗಿದೆ. ಬೆಂಗಳೂರಿನ ಪವನ್ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು. ಬೆಂಗಳೂರು ಈಗಾಗಲೇ ಫೈನಲ್ ಪ್ರವೇಶಿಸಿದೆ.