ಮುಂಬರುವ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಭಾರತದಲ್ಲೇ ಐಸಿಸಿ ಟೂರ್ನಿ ನಡೆಯುವುದರಿಂದ ಟ್ರೋಫಿ ಗೆಲ್ಲುವುದು ಪ್ರಮುಖ ಗುರಿಯಾಗಿದೆ.
ಇದೀಗ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಭಾರತ ತಂಡಕ್ಕೆ ಆಯ್ಕೆಯಾದ ಹಾಗೂ ಅವಕಾಶ ವಂಚಿತ ಆಟಗಾರರ ಬಗ್ಗೆ ತಮ್ಮದೇ ಆದ ಮೌಲ್ಯಮಾಪನ ಮಾಡುತ್ತಿದ್ದಾರೆ.

ಇದೇ ವೇಳೆ 1983ರ ವಿಶ್ವಕಪ್ ವಿಜೇತ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಶಾರ್ದೂಲ್ ಠಾಕೂರ್ ಆಯ್ಕೆ ಮಾಡಿದ್ದಕ್ಕಾಗಿ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ವಾಗ್ದಾಳಿ ನಡೆಸಿದರು.
ಶಾರ್ದೂಲ್ ಠಾಕೂರ್ ಅಪರೂಪದಲ್ಲಿ ತಮ್ಮ ಸಂಪೂರ್ಣ ಕೋಟಾ ಓವರ್‌ಗಳನ್ನು ಬೌಲ್ ಮಾಡುತ್ತಾರೆ ಮತ್ತು ಬ್ಯಾಟ್‌ನಿಂದ ಕಡಿಮೆ ರನ್ ಗಳಿಸುತ್ತಾರೆ ಎಂದು ತಿಳಿಸಿದರು. ಬದಲಿಗೆ, ಭಾರತವು ತಜ್ಞ ಬೌಲರ್‌ನನ್ನು ಆಯ್ಕೆ ಮಾಡಬೇಕಿತ್ತು ಎಂದು 63 ವರ್ಷದ ಕ್ರಿಸ್ ಶ್ರಿಕಾಂತ್ ಹೇಳಿದರು.

"ಎಲ್ಲರೂ ನಮಗೆ 8ನೇ ಕ್ರಮಾಂಕದಲ್ಲಿ ಬ್ಯಾಟರ್ ಬೇಕು ಎನ್ನುತ್ತಿದ್ದಾರೆ. 8ನೇ ಕ್ರಮಾಂಕದಲ್ಲಿ ಎಂತಹ ಬ್ಯಾಟರ್ ಬೇಕಿದೆ? ಶಾರ್ದೂಲ್ ಠಾಕೂರ್ ಅಲ್ಲಿ ಕೇವಲ 10 ರನ್ ಗಳಿಸುತ್ತಿದ್ದಾರೆ ಮತ್ತು ಅವರು ಹತ್ತು ಓವರ್ ಕೂಡ ಬೌಲ್ ಮಾಡುತ್ತಿಲ್ಲ. ನೇಪಾಳ ವಿರುದ್ಧದ ಪಂದ್ಯದಲ್ಲಿ ಎಷ್ಟು ಓವರ್‌ಗಳನ್ನು ಬೌಲ್ ಮಾಡಿದರು? ಕೇವಲ 4 ಮಾತ್ರ".
"ನೋಡಿ, ವೆಸ್ಟ್ ಇಂಡೀಸ್ ಅಥವಾ ಜಿಂಬಾಬ್ವೆಯಂತಹ ತಂಡಗಳ ವಿರುದ್ಧದ ಪ್ರದರ್ಶನಗಳನ್ನು ನೋಡಬೇಡಿ. ಅಲ್ಲಿ ಅವನು ಉತ್ತಮವಾಗಿ ಆಡಿದ್ದರೆ, ಅದನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಆದರೆ ಅದಕ್ಕೆ ಪ್ರಾಮುಖ್ಯತೆ ನೀಡಬೇಡಿ. ಬದಲಿಗೆ ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್‌ನಂತಹ ತಂಡಗಳ ವಿರುದ್ಧದ ಪ್ರದರ್ಶನಗಳ ಮೇಲೆ ಒತ್ತು ನೀಡಿ," ಎಂದು ಕೆ ಶ್ರೀಕಾಂತ್ ಅಭಿಪ್ರಾಯಪಟ್ಟರು.
"ಅದಕ್ಕಾಗಿಯೇ ನಾನು ಹೇಳುತ್ತೇನೆ, ಒಟ್ಟಾರೆ ಸರಾಸರಿಗೆ ಮೋಸ ಹೋಗಬೇಡಿ, ಯಾವಾಗಲೂ ವೈಯಕ್ತಿಕ ಪಂದ್ಯಗಳನ್ನು ನೋಡಿ," ಎಂದು ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥರಾಗಿರುವ ಕೆ ಶ್ರೀಕಾಂತ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.
ಇನ್ನು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಮೀಸಲು ಆಟಗಾರರ ಉದಾಹರಣೆಯನ್ನು ನೀಡಿ ಕೆ ಶ್ರೀಕಾಂತ್ ತಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಂಡರು.
"2011ರ ವಿಶ್ವಕಪ್ ತಂಡವನ್ನು ಹಿಂದಿರುಗಿ ನೋಡಿ. ಮೀಸಲು ಆಟಗಾರರು ಯಾರು ಎಂದು ನಾನು ಹೇಳಬೇಕೆ? ಇಬ್ಬರು ಸ್ಪಿನ್ನರ್‌ಗಳಿದ್ದರು. ಆರ್ ಅಶ್ವಿನ್, ಪಿಯೂಷ್ ಚಾವ್ಲಾ ಮತ್ತು ಒಬ್ಬ ಮಧ್ಯಮ ವೇಗಿ ಮುನಾಫ್ ಪಟೇಲ್. ಜೊತೆಗೆ ಯೂಸುಫ್ ಪಠಾಣ್‌ನಲ್ಲಿ ಒಬ್ಬ ಬ್ಯಾಟರ್ ಆಗಿ ಇದ್ದನು," ಎಂದು ಕೆ ಶ್ರೀಕಾಂತ್ ಹೇಳಿದರು.
ಶಾರ್ದೂಲ್ ಠಾಕೂರ್ 2023ರಲ್ಲಿ 9 ಏಕದಿನ ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ. ಆದರೆ, ಬ್ಯಾಟ್‌ನಲ್ಲಿ ಅವರು ಐದು ಇನ್ನಿಂಗ್ಸ್‌ಗಳಲ್ಲಿ 9.60 ಸರಾಸರಿ ಮತ್ತು 97.95 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 48 ರನ್ ಗಳಿಸಿದ್ದಾರೆ.