ಟೀಮ್ ಇಂಡಿಯಾದ ಕ್ರಿಕೆಟ್ ಆಟಗಾರನೊಬ್ಬ ಬೇರೆ ದೇಶದಲ್ಲಿ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಇವರು ಈಗಾಗಲೇ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿದ್ದ ಪ್ಲೇಯರ್. ತಮ್ಮ ಕಾಲತ್ಮಕ ಆಟದಿಂದ ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾಗಿದ್ದ ಬ್ಯಾಟರ್. ಇವರು ತಮ್ಮ ಚಾಣಕ್ಯ ನಡೆಗಳಿಂದ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದ್ದ ವಿಕೆಟ್ ಕೀಪರ್. ಈಗ ಭಾರತದ ಭರವಸೆಯ ವಿಕೆಟ್ ಕೀಪರ್ ಬೇರೆ ದೇಶದಲ್ಲಿ ಆಡುವುದನ್ನು ಕಾಣಬಹುದಾಗಿದೆ.
ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಸ್. ಭರತ್ ಇನ್ನು ಇಂಗ್ಲೆಂಡ್ ನೆಲದಲ್ಲಿ ಕ್ರಿಕೆಟ್ ಆಡಲಿದ್ದಾರೆ. 2025 ರ ಸರ್ರೆ ಚಾಂಪಿಯನ್‌ಶಿಪ್‌ಗಾಗಿ ಲಂಡನ್‌ನಲ್ಲಿರುವ ಡಲ್ವಿಚ್ ಕ್ರಿಕೆಟ್ ಕ್ಲಬ್‌ನೊಂದಿಗೆ ಭರತ್ ಸಹಿ ಹಾಕಿದ್ದಾರೆ. ಇನ್ನು ಇವರು ಡಲ್ವಿಚ್ ಕ್ರಿಕೆಟ್ ತಂಡಕ್ಕಾಗಿ ಆಡಲಿದ್ದಾರೆ. ಈ ಬಗ್ಗೆ ಕ್ರಿಕೆಟ್ ಸಂಸ್ಥೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ಟೀಮ್ ಇಂಡಿಯಾಕ್ಕೆ ಇವರು ಕಂ ಬ್ಯಾಕ್ ಮಾಡುವುದು ಕಷ್ಟ ಎಂದು ಅರಿತಿರುವ ಇವರು, ಈಗ ಇಂಗ್ಲೆಂಡ್ ಕ್ಲಬ್‌ನತ್ತ ಮುಖ ಮಾಡಿದ್ದಾರೆ.

ಕೆಎಸ್ ಭರತ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಫ್ರಾಂಚೈಸಿ ಕ್ರಿಕೆಟ್ ಆಡಿದ ಅನುಭವ ಇದೆ. ಇವರು ಐಪಿಎಲ್‌ನಲ್ಲಿ ಕೆಕೆಆರ್, ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಇವರಿಗೆ ಕೇವಲ 10 ಪಂದ್ಯಗಳಲ್ಲಿ ಆಡಲು ಅವಕಾಶ ಸಿಕ್ಕಿದೆ. ಇವರು ಈ ಬಾರಿ ಮೆಗಾ ಹರಾಜಿನಲ್ಲಿ ಭಾಗವಹಿಸಿದ್ದರು. ಆದರೆ ಇವರನ್ನು ಕೊಳ್ಳಲು ಯಾವುದೇ ಫ್ರಾಂಚೈಸಿ ಮನಸ್ಸು ಮಾಡಲಿಲ್ಲ. ಹೀಗಾಗಿ ಭರತ್ ಇನ್ನು ಇಂಗ್ಲೆಂಡ್‌ನಲ್ಲಿ ಆಡುವುದನ್ನು ಕಾಣಬಹುದಾಗಿದೆ.
ಕೆಎಸ್ ಭರತ್ ಭಾರತದ ಪರ 7 ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇವರು 2023ರಲ್ಲಿ ಪದಾರ್ಪಣೆ ಮಾಡಿದರು. ಇವರು 2023ರ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಭಾರತದ ಪರ ಆಡುವ ಅವಕಾಶವನ್ನು ಪಡೆದರು. ಆದರೆ ಇವರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು. ಫೆಬ್ರವರಿ 2024 ರಲ್ಲಿ ಭಾರತ ತಂಡದ ಪರ ಇವರು ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಅಲ್ಲಿಂದ ಇವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಕೆಎಸ್ ಭರತ್ ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ದಾಖಲೆ ಹೊಂದಿದ್ದಾರೆ. ಇವರು ಆಡಿರುವ 105 ಪ್ರಥಮ ದರ್ಜೆ ಪಂದ್ಯಗಳಲ್ಲಿ 5686 ರನ್ ಸಿಡಿಸಿದ್ದಾರೆ. ಇದರಲ್ಲಿ 10 ಶತಕ ಹಾಗೂ 32 ಅರ್ಧಶತಕಗಳು ಸೇರಿವೆ. ರಣಜಿ ಟ್ರೋಫಿಯಲ್ಲಿ ತ್ರಿಶತಕ ಬಾರಿಸಿದ ಹಿರಿಮೆ ಸಹ ಇವರದ್ದಾಗಿದೆ. ಇವರು 76 ಲೀಸ್ಟ್ ಎ ಪಂದ್ಯಗಳನ್ನು ಸಹ ಆಡಿದ್ದು 2502 ರನ್ ಗಳಿಸಿದ್ದಾರೆ.
ಇವರು ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 18 ಕ್ಯಾಚ್ ಹಾಗೂ 1 ಸ್ಟಂಪ್ ಮಾಡಿದ್ದಾರೆ. ಇವರು ತಮ್ಮ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಫೆ.2 ರಂದು ವಿಶಾಖಪಟ್ಟಣದಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದಾರೆ.