
ಮುಂಬೈ, ಮೇ 14: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ನಾಯಕ ಹಾಗೂ ಚತುರ ಆಟಗಾರ ಮಹೇಂದ್ರ ಸಿಂಗ್ ಧೋನಿ. ಪಂದ್ಯದ ವೇಳೆ ತಮ್ಮ ದಿಟ್ಟ ನಿರ್ಧಾರಗಳ ಮೂಲಕ ಯಶಸ್ಸು ಕಾಣುವುದರಲ್ಲಿ ಮಾಹಿ ಎತ್ತಿದ ಕೈ. ಅಂದಹಾಗೆ ಧೋನಿ ಕೂಡ ಬಹಳಾ ತಪ್ಪುಗಳನ್ನು ಮಾಡುತ್ತಾರೆ ಎಂದು ಹೇಳುವ ಮೂಲಕ ಯುವ ಸ್ಪಿನ್ನರ್ ಕುಲ್ದೀಪ್ ಯಾದವ್ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
"ಹಲವು ಬಾರಿ ಧೋನಿ ತಪ್ಪುಗಳನ್ನು ಮಾಡುತ್ತಾರೆ. ಆದರೆ, ಇದನ್ನು ಅವರಿಗೆ ಹೇಳುವ ಸಾಹಸ ಮಾಡಲು ನಮ್ಮಿಂದ ಸಾಧ್ಯವಿಲ್ಲ,'' ಎಂದು ಸೋಮವಾರ ತಡರಾತ್ರಿ ನಡೆದ ಸಿಯೆಟ್ ಟೈರ್ಸ್ ಕ್ರಿಕೆಟ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಹಾಸ್ಯದ ಚಟಾಕಿ ಹಾರಿಸಿದ್ದಾರೆ.
ಇನ್ನು ಧೋನಿ ಮೈದಾನದಲ್ಲಿ ಹೇಗಿರುತ್ತಾರೆ ಎಂದೆಲ್ಲಾ ವಿವರಿಸಿರುವ ಕುಲ್ದೀಪ್, ಧೋನಿ ಹೆಚ್ಚು ಮೌನಿಯಾಗಿರುತ್ತಾರೆ ಓವರ್‌ಗಳ ಬಳಿಕವಷ್ಟೇ ಅವರು ಮಾತನಾಡುವುದು. ಅದು ಕೂಡ ಅಗತ್ಯವಿದ್ದರೆ ಮಾತ್ರವೇ ಅವರ ನಿಲುವನ್ನು ವ್ಯಕ್ತಪಡಿಸುತ್ತಾರೆ ಎಂದಿದ್ದಾರೆ. "ಅವರು ಹೆಚ್ಚು ಮಾತನಾಡುವುದಿಲ್ಲ. ಏನಾದರು ಸೂಚಿಸಬೇಕೆಂದಿದ್ದರೆ, ಓವರ್ ಮುಗಿದ ಬಳಿಕ ಹೇಳುತ್ತಾರೆ,'' ಎಂದು ಕುಲ್ದೀಪ್ ಹೇಳಿದ್ದಾರೆ.
ಆಧುನಿಕ ಕ್ರಿಕೆಟ್‌ನಲ್ಲಿ ಎಂ.ಎಸ್ ಧೋನಿ ವಿಶ್ವ ಕಂಡ ಶ್ರೇಷ್ಠ ಫಿನಿಷರ್ ಆಗಿದ್ದಾರೆ. ತಮ್ಮ ನಾಯಕತ್ವದ ಮೂಲಕ ಭಾರತಕ್ಕೆ 2007ರ ಟಿ20 ವಿಶ್ವಕಪ್ ಮತ್ತು 2001ರ ಏಕದಿನ ಕ್ರಿಕೆಟ್ ವಿಶ್ವಕಪ್‌ಗಳಲ್ಲಿ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲೂ ಭಾರತಕ್ಕೆ ನಂ.1 ಸ್ಥಾನ ತಂದುಕೊಟ್ಟಿದ್ದರು.
ಭಾನುವಾರ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ 2019ರ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಎಂ.ಎಸ್ ಧೋನಿ ಆಡಿದ 15 ಪಂದ್ಯಗಳಲ್ಲಿ 134.62ರ ಸ್ಟ್ರೈಕ್‌ರೇಟ್‌ನೊಂದಿಗೆ 416 ರನ್‌ಗಳನ್ನು ಸಿಡಿಸಿದ್ದರು. ಆದರೆ, ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ಎದುರು 1 ರನ್‌ಗಳಿಂದ ಸೋತು ನಿರಾಸೆ ಅನುಭವಿಸಿತ್ತು.
ಇನ್ನು ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲಬೇಕಾದರೆ ಧೋನಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಭಾರತ ತಂಡದ ಬೌಲರ್‌ಗಳಿಗೆ ಧೋನಿಯಿಂದ ಅಗತ್ಯದ ಮಾರ್ಗದರ್ಶನ ಇಲ್ಲದ ಹೊರತಾಗಿ ಟೀಮ್ ಇಂಡಿಯಾ ಕಠಿಣ ಪಂದ್ಯಗಳನ್ನು ಗೆಲ್ಲುವುದು ಕಷ್ಟಸಾಧ್ಯ. ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಭಾರತ ತಂಡ ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ವಿಶ್ವಕಪ್‌ಗೆ ಭಾರತ ಪ್ರಕಟಿಸಿರುವ ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್ ರಾಹುಲ್, ವಿಜಯ್ ಶಂಕರ್, ಕೇದಾರ್ ಜಾಧವ್, ಎಂ.ಎಸ್ ಧೋನಿ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ.