Kuldeep Yadav: ಏಕದಿನ ಕ್ರಿಕೆಟ್‌ನಲ್ಲಿ ಕನ್ನಡಿಗನ ದಾಖಲೆ ಅಳಿಸಿ ಹಾಕಿದ ಕುಲದೀಪ್ ಯಾದವ್
ಮಂಗಳವಾರ, ಸೆಪ್ಟೆಂಬರ್ 12ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ 41 ರನ್‌ಗಳ ರೋಚಕ ಗೆಲುವು ಸಾಧಿಸಿತು. ಈ ವೇಳೆ ಲೆಗ್ ಸ್ಪಿನ್ನರ್ ಕುಲದೀಪ್ ಯಾದವ್ 4 ವಿಕೆಟ್ ಪಡೆಯುವ ಮೂಲಕ ಗೆಲುವಿನ ರೂವಾರಿಯಾದರು.
ಭಾರತ ತಂಡದ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳ ಗಡಿಯನ್ನು ತಲುಪಿದರು. ಕೇವಲ 88 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಅತ್ಯಂತ ವೇಗದ ಭಾರತೀಯ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಇದೇ ಹಾದಿಯಲ್ಲಿ ಕುಲದೀಪ್ ಯಾದವ್ ಭಾರತೀಯ ಲೆಜೆಂಡ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಹಿಂದಿಕ್ಕಿದರು. ಈ ಹಿಂದೆ 106 ಪಂದ್ಯಗಳಲ್ಲಿ 150 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ್ದ ಅನಿಲ್ ಕುಂಬ್ಳೆ ಅವರು ಅತ್ಯಂತ ವೇಗದ ಭಾರತೀಯ ಸ್ಪಿನ್ನರ್ ಎನಿಸಿದ್ದರು. ಇದೀಗ ಆ ಸ್ಥಾನ ಕುಲದೀಪ್ ಯಾದವ್ ಪಾಲಾಯಿತು.
ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕುಲದೀಪ್ ಯಾದವ್ ಈ ಮೈಲಿಗಲ್ಲನ್ನು ಸಾಧಿಸಿದರು. ಈ ಪಂದ್ಯದಲ್ಲಿ ಕುಲದೀಪ್ ಯಾದವ್ 9.3 ಓವರ್‌ಗಳಲ್ಲಿ 4.52 ಎಕಾನಮಿ ದರದಲ್ಲಿ 43 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.

ಶ್ರೀಲಂಕಾದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸದೀರ ಸಮರವಿಕ್ರಮ ಮತ್ತು ಚರಿತ್ ಅಸಲಂಕಾ ಅವರ ನಿರ್ಣಾಯಕ ವಿಕೆಟ್ ಪಡೆದರಲ್ಲದೆ, ಬಾಲಂಗೋಚಿಗಳಾದ ಕಸುನ್ ರಜಿತ ಮತ್ತು ಮತೀಶ ಪತಿರಾಣ ವಿಕೆಟ್ ಕಬಳಿಸಿ ಅಂತ್ಯಹಾಡಿದರು.
ಕುಲದೀಪ್ ಯಾದವ್ 88 ಏಕದಿನ ಪಂದ್ಯಗಳಲ್ಲಿ 25.64ರ ಸರಾಸರಿಯಲ್ಲಿ 25 ರನ್‌ಗಳಿಗೆ 6 ವಿಕೆಟ್ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳೊಂದಿಗೆ 150 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಮಾದರಿಯಲ್ಲಿ ಭಾರತ ತಂಡದ ಪರ ಏಳು ಬಾರಿ 4 ವಿಕೆಟ್ ಮತ್ತು ಎರಡು ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ.
ಇನ್ನು 80 ಪಂದ್ಯಗಳಲ್ಲಿ 150 ವಿಕೆಟ್‌ಗಳನ್ನು ತಲುಪಿದ ವೇಗಿ ಮೊಹಮ್ಮದ್ ಶಮಿ ನಂತರ 150 ವಿಕೆಟ್ ಗಡಿಯನ್ನು ತಲುಪಿದ ಎರಡನೇ ಅತಿ ವೇಗದ ಭಾರತೀಯ ಬೌಲರ್ ಆಗಿದ್ದಾರೆ. ಈ ಮೈಲಿಗಲ್ಲು ಸಾಧಿಸಿದ ವೇಗದ ಭಾರತೀಯ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ಕುಲದೀಪ್ ಯಾದವ್ ಪಾತ್ರರಾದರು.
ಶ್ರೀಲಂಕಾದ ಅಜಂತಾ ಮೆಂಡಿಸ್ (84 ಪಂದ್ಯಗಳು), ರಶೀದ್ ಖಾನ್ (80 ಪಂದ್ಯಗಳು) ಮತ್ತು ಸಕ್ಲೇನ್ ಮುಷ್ತಾಕ್ (78 ಪಂದ್ಯಗಳು) ಕುಲದೀಪ್‌ಗಿಂತ ವೇಗವಾಗಿ 150 ವಿಕೆಟ್ ಪಡೆದ ಸ್ಪಿನ್ನರ್‌ಗಳಾಗಿದ್ದಾರೆ.
4 ಪಂದ್ಯಗಳಲ್ಲಿ 9 ವಿಕೆಟ್‌ಗಳೊಂದಿಗೆ ಕುಲದೀಪ್ ಯಾದವ್ ಸದ್ಯ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ 5 ವಿಕೆಟ್ ಕಬಳಿಸಿದ್ದಾರೆ.
ಇನ್ನು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ನಾಯಕ ರೋಹಿತ್ ಶರ್ಮಾ (48 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 53 ರನ್ ಮತ್ತು ಶುಭ್ಮನ್ ಗಿಲ್ 19 ರನ್ ಗಳಿಸಿ ಮೊದಲ ವಿಕೆಟ್‌ಗೆ 80 ರನ್ ಜೊತೆಯಾಟ ನೀಡಿದರು.
ಆ ನಂತರ ಸ್ಪಿನ್ ಜೋಡಿಯಾದ ದುನಿತ್ ವೆಲ್ಲಾಲಗೆ 40 ರನ್‌ಗಳಿಗೆ 5 ವಿಕೆಟ್ ಮತ್ತು ಚರಿತ್ ಅಸಲಂಕಾ 18 ರನ್‌ಗಳಿಗೆ 4 ವಿಕೆಟ್ ಅವರ ಸ್ಪಿನ್ ದಾಳಿಗೆ ಸಿಲುಕಿದ ಭಾರತ ಕಡಿಮೆ ಮೊತ್ತ ಗಳಿಸಲು ಕಾರಣವಾಯಿತು.
ಕೆಎಲ್ ರಾಹುಲ್ 44 ಎಸೆತಗಳಲ್ಲಿ 2 ಬೌಂಡರಿ ಸಹಿತ 39 ರನ್ ಮತ್ತು ಇಶಾನ್ ಕಿಶನ್ 61 ಎಸೆತಗಳಲ್ಲಿ 33 ರನ್ ಗಳಿಸಿ ನಾಲ್ಕನೇ ವಿಕೆಟ್‌ಗೆ 63 ರನ್‌ಗಳ ಜೊತೆಯಾಟ ನೀಡಿದರು. ನಂತರ ಭಾರತಕ್ಕೆ ದೊಡ್ಡ ಜೊತೆಯಾಟ ಬರಲಿಲ್ಲ. ಅಕ್ಷರ್ 26 ರನ್ ಗಳಿಸಿ ಭಾರತ 200 ರನ್‌ಗಳ ಗಡಿ ದಾಟಲು ನೆರವಾದರು ಮತ್ತು ಅಂತಿಮವಾಗಿ 49.1 ಓವರ್‌ಗಳಲ್ಲಿ 213 ರನ್‌ಗಳಿಗೆ ಆಲೌಟ್ ಆಯಿತು.
214 ರನ್‌ಗಳ ಬೆನ್ನಟ್ಟಿದ ಶ್ರೀಲಂಕಾ ತಂಡ 172 ರನ್‌ಗಳಿಗೆ ಗಂಟುಮೂಟೆ ಕಟ್ಟಿತು. ಜಸ್ಪ್ರೀತ್ ಬುಮ್ರಾ 30 ರನ್ ನೀಡಿ 2 ವಿಕೆಟ್, ಕುಲದೀಪ್ ಯಾದವ್ 43 ರನ್ ನೀಡಿ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 2 ವಿಕೆಟ್ ಕಬಳಿಸಿದರು. ಮೊಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications