ಕುಂಬ್ಳೆ ರಾಜಿನಾಮೆ: 'ಟೀಂ ಇಂಡಿಯಾ' ಚಳಿ ಬಿಡಿಸಿದ ಗವಾಸ್ಕರ್
ಮುಂಬೈ, ಜೂನ್ 21: ಭಾರತೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆಯವರು ರಾಜಿನಾಮೆ ಸಲ್ಲಿಸಿರುವುದರ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಗವಾಸ್ಕರ್ ಅವರು ಟೀಂ ಇಂಡಿಯಾ ಆಟಗಾರರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಇಂಥ ಮನೋಸ್ಥಿತಿಯ ಆಟಗಾರರನ್ನು ತಂಡದಿಂದಲೇ ಕಿತ್ತುಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾಗಿರುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರೊಂದಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದ ಕಾರಣದಿಂದಾಗಿ ಅನಿಲ್ ಕುಂಬ್ಳೆಯವರು ಮಂಗಳವಾರ (ಜೂನ್ 21) ಸಂಜೆ ಹಠಾತ್ತಾಗಿ ತಮ್ಮ ಕೋಚ್ ಹುದ್ದೆಗೆ ರಾಜಿನಾಮೆ ಸಲ್ಲಿಸಿದರು.
ಇತ್ತೀಚೆಗೆ ಮುಗಿದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ನಂತರ ಕೋಚ್ ಆಗಿ ಅವರ ಸೇವೆ ಮುಕ್ತಾಯವಾಗಬೇಕಿತ್ತಾದರೂ, ಸದ್ಯದ ಮಟ್ಟಿಗೆ ಟೀಂ ಇಂಡಿಯಾ ಕೈಗೊಂಡಿರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅವರನ್ನೇ ಕೋಚ್ ಆಗಿ ಮುಂದುವರಿಸಿ ಬಿಸಿಸಿಐ ಆದೇಶ ಹೊರಡಿಸಿತ್ತು.
ಆದರೆ,ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ತರುವಾಯ ಲಂಡನ್ ನಿಂದ ವೆಸ್ಟ್ ಇಂಡೀಸ್ ಗೆ ಟೀಂ ಇಂಡಿಯಾ ತೆರಳಿದ್ದರೂ, ಕುಂಬ್ಳೆ ಮಾತ್ರ ಲಂಡನ್ ನಲ್ಲೇ ಉಳಿದರು. ಅಲ್ಲಿಂದಲೇ ಅವರು ತಮ್ಮ ರಾಜಿನಾಮೆ ಪತ್ರವನ್ನು ಬಿಸಿಸಿಐಗೆ ರವಾನಿಸಿದ್ದಾರೆ.

ಅಗೌರವದ ಪರಿಣಾಮವೇ ರಾಜಿನಾಮೆ
ಆಟಗಾರರ ವಿರುದ್ಧ ಗುಡುಗಿರುವ ಅವರು, ''ಟೀಂ ಇಂಡಿಯಾ ಆಟಗಾರರು ತರಬೇತುದಾರರಿಗೆ ಕೊಡಬೇಕಾದ ಗೌರವ ಕೊಡುತ್ತಿಲ್ಲ. ತಾವು ಹೇಳಿದಂತೆ ಕೋಚ್ ಕೇಳಬೇಕೆನ್ನುವ ಮನೋಭಾವ ಆಟಗಾರರಲ್ಲಿ ಹೆಚ್ಚಾಗಿದೆ. ಇದರ ಪರಿಣಾಮವೇ, ಕುಂಬ್ಳೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವಂತಾಗಿದೆ'' ಎಂದು ಅವರು ಟೀಕಿಸಿದ್ದಾರೆ.

ನಿಷ್ಠುರ ವ್ಯಕ್ತಿಗಳು ಬೇಕಿಲ್ಲ ಎಂದ ಸನ್ನಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರ ವಿರುದ್ಧ ಪರೋಕ್ಷವಾಗಿ ಟೀಕಾಸ್ತ್ರ ಪ್ರಯೋಗಿಸಿರುವ ಅವರು, ''ಆಟಗಾರರು ಹೇಳಿದ್ದಕ್ಕೆಲ್ಲಾ ಹೂಂ ಎಂದು ತಲೆಯಲ್ಲಾಡಿಸುವ ಕೋಚ್ ನಿಮಗೆ ಬೇಕೆನಿಸುತ್ತದೆ. ನಿಷ್ಠುರವಾಗಿ, ಕಾಯಕವೇ ಕೈಲಾಸ ಎನ್ನುವಂಥ ವ್ಯಕ್ತಿಗಳು ನಿಮಗೆ ಬೇಕಿಲ್ಲ ಅಲ್ಲವೇ'' ಎಂದು ಅವರು ಕಿಡಿಕಾರಿದ್ದಾರೆ.
ಕುಂಬ್ಳೆ ನಿರ್ಗಮನ, ಯಾರಾಗಲಿದ್ದಾರೆ ಹೊಸ ಕೋಚ್?

ನಿಷ್ಠುರವಾದರೆ ಕೋಚ್ ಹುದ್ದೆಗೆ ಸಂಚಕಾರ
''ಟೀಂ ಇಂಡಿಯಾದಲ್ಲಿ ಪ್ರಾಕ್ಟೀಸ್ ಗೆ ಗೈರು ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇವತ್ತು ನಮಗೆ ಮೈ ಹುಷಾರಿಲ್ಲ ಎಂದು ಹೇಳಿ ತರಬೇತಿಗೆ ಚಕ್ಕರ್ ಹಾಕಿ ಶಾಪಿಂಗ್ ಗೆ ಹೋಗುವವರ ಸಂಖ್ಯೆ ಗಣನೀಯವಾಗಿದೆ. ಇಂಥವರ ಬಗ್ಗೆ ಕೊಂಚ ನಿಷ್ಠುರವಾದರೆ ಕೋಚ್ ಗೆ ತಂಡದಲ್ಲಿ ಉಳಿಗಾಲವಿರದಂಥ ಪರಿಸ್ಥಿತಿ ನಿರ್ಮಾಣವಾಗಿದೆ'' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ತಂಡಕ್ಕೆ ಇಂಥವರಿಂದ ಮಾರಕ
ಇಂಥ ಸೋಗಲಾಡಿ ಹಾಗೂ ಹಠಮಾರಿ ಆಟಗಾರರನ್ನು ತಂಡದಿಂದಲೇ ಕಿತ್ತುಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇಂಥ ಆಟಗಾರರಿದ್ದರೆ ತಂಡಕ್ಕೆ ಅದು ಮಾರಕ ಎಂದು ಎಚ್ಚರಿಸಿದ್ದಾರೆ.
ಕುಂಬ್ಳೆ ರಾಜೀನಾಮೆ ಪತ್ರದಲ್ಲಿ ಅಸಲಿ ರಹಸ್ಯ ಬಹಿರಂಗ

ತಂಡದ ಸಾಧನೆ ಪರಾಮರ್ಶಿಸಿ
ಇದಲ್ಲದೆ ಕುಂಬ್ಳೆಯವರನ್ನು ಕೊಂಡಾಡಿದ ಸನ್ನಿ, ಕುಂಬ್ಳೆಯವರ ಕಾರ್ಯವೈಖರಿ ಬಗ್ಗೆ ಟೀಕಿಸುವ ಮುನ್ನ ಅವರ ಸಾಧನೆಯನ್ನು ನೋಡಬೇಕು. ಅಲ್ಲದೆ, ಅವರು ಕೋಚ್ ಆದ ನಂತರ ಒಂದು ವರ್ಷದ ಅವಧಿಯಲ್ಲಿ ತಂಡದ ಸಾಧನೆಗಳನ್ನೂ ಪರಾಮರ್ಶಿಸಬೇಕು. ಅಂಥ ಆಟಗಾರನ ಸೇವೆಯನ್ನು ಕಳೆದುಕೊಂಡಿದ್ದು ನಿಜಕ್ಕೂ ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications