
ಚೆನ್ನೈನಲ್ಲಿ ಎರಡು ಟೆಸ್ಟ್ ಪಮದ್ಯಗಳು ಮುಕ್ತಾವಾದ ನಂತರ ಇದೀಗ ಎಲ್ಲರ ಚಿತ್ತ ಮಿನಿ ಹರಾಜಿನತ್ತ ನೆಟ್ಟಿದೆ. ಗುರುವಾರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಯಾವ ಆಟಗಾರರತ್ತ ಯಾವ ತಂಡ ಚಿತ್ತ ನೆಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಈಗ ಭಾರೀ ಲೆಕ್ಕಾಚಾರದಲ್ಲಿ ತೊಡಗಿದೆ.
ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಓರ್ವ ಆಲ್‌ರೌಂಡರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಕೊಲ್ಕತ್ತಾ ತಂಡದ ಪರವಾಗಿ ಕಳೆದ ಹಲವು ಆವೃತ್ತಿಗಳಲ್ಲಿ ಮಿಂಚು ಹರಿಸುತ್ತಿರುವ ಆಂಡ್ರೆ ರಸ್ಸೆಲ್‌ಗೆ ಈ ಆಟಗಾರನನ್ನು ಗೌತಮ್ ಗಂಭೀರ್ ಹೋಲಿಸಿದ್ದಾರೆ.
ಗೌತಮ್ ಗಂಭೀರ್ ಹೆಸರಿಸಿದ ಆ ಆಟಗಾರ ಬೇರೆ ಯಾರೂ ಅಲ್ಲ. ನ್ಯೂಜಿಲೆಂಡ್‌ನ ಕೈಲ್ ಜ್ಯಾಮಿಸನ್. ಕೆಕೆಆರ್ ತಂಡಕ್ಕೆ ಬ್ಯಾಟ್ ಹಾಗೂ ಬೌಲಿಂಗ್ ಮೂಲಕ ಅದ್ಭುತ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಆಂಡ್ರೆ ರಸೆಲ್ ಅವರ ರೀತಿಯಲ್ಲೇ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಕೈಲ್ ಜ್ಯಾಮಿಸನ್ ಅವರಿಗೆ ಇದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಆದರೆ ಇದೇ ಸಂದರ್ಭದಲ್ಲಿ ಗೌತಮ್ ಗಂಭೀರ್ "ಕೈಲ್ ಜ್ಯಾಮಿಸನ್ ಓರ್ವ ಪರಿ ಪೂರ್ಣ ಆಟಗಾರನಾಗಿ ಹೊರಹೊಮ್ಮಿಲ್ಲ. ಆದರೆ 6 ಅಡಿ 8 ಇಂಚು ಇರುವ ಈ ಕ್ರಿಕೆಟಿಗ ಯುವ ಆಟಗಾರನಾಗಿದ್ದು ಈತನನ್ನು ಅದ್ಭುತವಾಗಿ ಬಳಸಿಕೊಳ್ಳಬಹುದಾಗಿದೆ. ಆಂಡ್ರೆ ರಸೆಲ್ ಹಾಗೂ ಕ್ರಿಸ್ ಮೋರಿಸ್‌ರಂತಾ ಆಟಗಾರರು ಅತ್ಯುನ್ನತ ಮಟ್ಟದ ಆಟಗಾರರಾಗಿದ್ದಾರೆ. ಅವರ ಸಾಮರ್ಥ್ಯಕ್ಕೆ ತಮ್ಮ ಆಟಗಾರರನ್ನು ಪಡೆಯಲು ಸಾಧ್ಯವಿಲ್ಲ. ಆದರೆ 26ರ ಹರೆಯದ ಜ್ಯಾಮಿಸನ್ ತಮ್ಮ ಆಟದಲ್ಲಿ ಸಾಕಷ್ಟು ಸುಧಾರಿಸಿಕೊಳ್ಳುವ ಅವಕಾಶಗಳು ಇವೆ" ಎಂದು ಗಂಭೀರ್ ಹೇಳಿದ್ದಾರೆ.
ಗುರುವಾರ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಕೈಲ್ ಜ್ಯಾಮಿಸನ್ 75 ಲಕ್ಷ ಮೂಲ ಬೆಲೆಯನ್ನು ಹೊಂದಿದ್ದಾರೆ. ಈವರೆಗೆ ಅವರು 6 ಟೆಸ್ಟ್, 2 ಏಕದಿನ ಹಾಗೂ 4ಟಿ20 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ.