ಬೆಂಗಳೂರು ಬ್ಲಾಸ್ಟರ್ಸ್ ತಂಡದ ಸಂಘಟಿತ ಆಟದಿಂದ ಶುಭಾಂಗ್ ಹೆಗ್ಡೆ ಪಡೆ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಸತತ 2 ಸೋಲುಗಳನ್ನು ಕಂಡಿದ್ದ ಬೆಂಗಳೂರು ತಂಡ ಮೊದಲ ಜಯ ದಾಖಲಿಸಿದೆ.
ಗುರುವಾರ ನಡೆದ ಟೂರ್ನಿಯ 8ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡುವ ನಿರ್ಧಾರವನ್ನು ಬೆಂಗಳೂರು ತಂಡ ಮಾಡಿತು. ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ ಮೈಸ್ಟಿಕ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಲುವನಿತ್ ಸಿಸೊಡಿಯಾ (13) ಹಾಗೂ ಭರವಸೆಯ ಬ್ಯಾಟರ್ ನಿಕಿನ್ ಜೋಸ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಪ್ರಜ್ವಲ್ ಪವನ್ (2), ಸ್ಮರಣ್ ರವಿಚಂದ್ರನ್ (12), ಸಿದ್ಧಾರ್ಥ್ (5), ಪ್ರಥ್ವಿರಾಜ್ (8), ಪ್ರವೀಣ್ ದುಬೆ (1) ರನ್ ಕಲೆ ಹಾಕುವಲ್ಲಿ ವಿಫಲರಾದರು.

ಕೆಳ ಮಧ್ಯಮ ಕ್ರಮಾಂಕದಲ್ಲಿ ಲವಿಶ್ ಕೌಶಲ್ 30 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ 54 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಇವರನ್ನು ಬಿಟ್ಟರೆ ಬೇರೆ ಯಾವ ಬ್ಯಾಟರ್ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಪರಿಣಾಮ ಗುಲ್ಬರ್ಗ್ 19.5 ಓವರ್‌ಗಳಲ್ಲಿ 112 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಬೆಂಗಳೂರು ತಂಡದ ಪರ ಮೊಹ್ಸಿನ್ ಖಾನ್, ವಿದ್ಯಾಧರ್ ಪಾಟೀಲ್, ರೋಹನ್ ನವೀನ್, ಶುಭಂ ಹೆಗ್ಡೆ ತಲಾ 2 ವಿಕೆಟ್ ಕಬಳಿಸಿದರು.
ಬೆಂಗಳೂರು ಬ್ಲಾಸ್ಟರ್ಸ್ ತಂಡದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದರೂ ಇನ್ನೊಂದು ಬದಿಯಲ್ಲಿ ನೆಲಕಚ್ಚಿ ನಿಂತು ಬ್ಯಾಟ್ ಮಾಡಿದ ಆರಂಭಿಕ ಆಟಗಾರ ಎಲ್ ಆರ್ ಚೇತನ್ 48 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 75 ರನ್ ಸಿಡಿಸಿ ತಂಡಕ್ಕೆ ಗೆಲುವಿನ ಮಾಲೆ ತೋಡಿಸಿದರು. ಅಂತಿಮವಾಗಿ ಬೆಂಗಳೂರು 14.2 ಓವರ್‌ಗಳಲ್ಲಿ 5 ವಿಕೆಟ್‌ಗೆ 113 ರನ್ ಸೇರಿಸಿತು.

ಇದಕ್ಕೂ ಮೊದಲು ಮೈಸೂರ್ ವಾರಿಯರ್ಸ್ ಹಾಗೂ ಮಂಗಳೂರು ಡ್ರಾಗ್ಯಾನ್ಸ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಉಭಯ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡವು. ಈ ಒಂದು ಅಂಕದಿಂದ ಮಂಗಳೂರು ತಂಡದ ಆಡಿದ 3 ಪಂದ್ಯಗಳಲ್ಲಿ 5 ಅಂಕ ಕಲೆ ಹಾಕಿ ಅಂಕ ಪಟ್ಟಿಯಲ್ಲಿ ಮೊದಲ ಅಗ್ರ ಸ್ಥಾನದಲ್ಲಿದೆ. ಮೈಸೂರು ವಾರಿಯರ್ಸ್ ಆಡಿದ 3 ಪಂದ್ಯಗಳಲ್ಲಿ 3 ಅಂಕ ಕಲೆ ಹಾಕಿದೆ.