ಈ ಬಾರಿ ಐಪಿಎಲ್ ದಿನ ಕಳೆದಂತೆ ರೋಚಕತೆ ಹೆಚ್ಚಿಸುತ್ತಿದೆ. ಈ ವೇಳೆ ಹಲವು ಸ್ಟಾರ್ ಆಟಗಾರರು ತಮ್ಮ ಕ್ಷಮತೆಯನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿದ್ದಾರೆ. ಈ ಮೂಲಕ ತಮ್ಮ ಮೇಲೆ ಭರವಸೆಯ ಇಡುವಂತೆ ಸೂಚಿಸಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಭರವಸೆಯನ್ನು ಮೂಡಿಸಿದ ಆಟಗಾರರಲ್ಲಿ ಅನುಭವಿ ಹಾಗೂ ಯುವ ಆಟಗಾರರ ಸಂಖ್ಯೆ ಸಮನಾಗಿದೆ. ಈ ವೇಳೆ ಹಲವು ಯುವ ಆಟಗಾರರು ಹೆಡ್‌ಲೈನ್ ಮಾಡಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಈ ವರೆಗೆ ಮೂರು ಆಟಗಾರರು ಬ್ಯಾಟಿಂಗ್‌ನಲ್ಲಿ ಮಿಂಚಿ ಶತಕದ ಸಾಧನೆ ಮಾಡಿದ್ದಾರೆ. ಈ ಮೂವರು ಆಟಗಾರರು ಭಾರತೀಯರು ಎಂಬುದೇ ಖುಷಿಯ ವಿಚಾರ. ಈ ವರೆಗೆ ನಡೆದ ಐಪಿಎಲ್‌ನಲ್ಲಿ ಮೂರು ಬ್ಯಾಟರ್‌ಗಳು ಶತಕದ ಸಾಧನೆ ಮಾಡಿದ್ದಾರೆ. ಇದರಲ್ಲಿ ಇಬ್ಬರು ಈಗಾಗಲೇ ಭಾರತೀಯ ಪರ ಆಡಿ ಸೈ ಎನಿಸಿಕೊಂಡಿದ್ದರೆ, ಇನ್ನೊಬ್ಬರು ಅನ್‌ಕ್ಯಾಪ್ಡ್ ಆಟಗಾರ. ಈ ಮೂವರು ಆಟಗಾರರು ಸಹ ಎಡಗೈ ಆಟಗಾರರು ಎಂಬುದೇ ವಿಶೇಷ.

ಸಾಮಾನ್ಯವಾಗಿ ಎಡ ಅಂದರೆ ಜನರಿಗೆ ತಾತ್ಸರ ಮನೋಭಾವ. ಆದರೆ ಈ ಎಡಗೈ ಆಟಗಾರರೇ ಫ್ರಾಂಚೈಸಿಗಳ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಈ ಮೂಲಕ ಎಡವೂ ತಂಡಕ್ಕೆ ಮುಖ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಮೂರು ಎಡಗೈ ಆಟಗಾರರು ಶತಕ ಬಾರಿಸಿ ಅಬ್ಬರಿಸಿದ್ದಾರೆ.
ಪ್ರಸಕ್ತ ಐಪಿಎಲ್‌ನಲ್ಲಿ ಮೊದಲ ಶತಕ ಬಾರಿಸಿದ ಹಿರಿಮೆ ಭಾರತದ ಇಶಾನ್ ಕಿಶನ್ ಅವರಿಗೆ ಸಲ್ಲುತ್ತದೆ. ಇವರು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಅಮೋಘ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದರು. ಈ ಪಂದ್ಯದಲ್ಲಿ ಇಶಾನ್ 47 ಎಸೆತಗಳಲ್ಲಿ 106 ರನ್ ಸಿಡಿಸಿದ್ದಾರೆ. ಈ ವೇಳೆ 9 ಬೌಂಡರಿ, 3 ಸಿಕ್ಸರ್‌ಗಳು ಸೇರಿವೆ.

18ನೇ ಆವೃತ್ತಿಯ ಐಪಿಎಲ್‌ನ 22ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪ್ರಿಯಾಂಶ್ ಆರ್ಯ ಸಹ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಿದ್ರು. ಈ ವೇಳೆ ಇವರ ಬ್ಯಾಟ್‌ನಿಂದ 7 ಬೌಂಡರಿ, 9 ಸಿಕ್ಸರ್‌ಗಳು ಹರಿದು ಬಂದಿವೆ. ಅಲ್ಲದೆ 42 ಎಸೆತಗಳಲ್ಲಿ 103 ರನ್ ಸಿಡಿಸಿ ಅಬ್ಬರಿಸಿದ್ದಾರೆ. ಇವರ ಅಮೋಘ ಆಟದ ನೆರವಿನಿಂದ ಪಂಜಾಬ್ ಚೆನ್ನೈ ತಂಡವನ್ನು 18 ರನ್‌ಗಳಿಂದ ಮಣಿಸಿತು.
ಈ ಆವೃತ್ತಿಯಲ್ಲಿ ಮೂರನೇ ಶತಕ ಬಾರಿಸಿದ ಹೆಗ್ಗಳಿಕೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ ಅವರಿಗೆ ಸಲ್ಲುತ್ತದೆ. ಇವರು ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪಂಜಾಬ್ ನೀಡಿದ್ದ 246 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ತಂಡದ ಆರಂಭಿಕ ಅಭಿಷೇಕ್ ಅಬ್ಬರಿಸಿದರು. ಇವರು 55 ಎಸೆತಗಳಲ್ಲಿ 14 ಬೌಂಡರಿ, 10 ಸಿಕ್ಸರ್ ಸಹಾಯದಿಂದ 141 ರನ್ ಬಾರಿಸಿದರು.