ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಪ್ರಕಟಿತ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. 8 ವಿಕೆಟ್‌ಗಳ ಬಳಿಕ ಇಂಗ್ಲೆಂಡ್ ತಂಡದಲ್ಲಿ ಭರವಸೆಯ ಆಲ್‌ರೌಂಡರ್ ಎಂಟ್ರಿ ಪಡೆದಿದ್ದಾರೆ. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೆ ಗಾಯಳು ಸ್ಪಿನ್ ಬೌಲರ್ ಶೋಯೆಬ್ ಬಶೀರ್ ಗಾಯಕ್ಕೆ ತುತ್ತಾಗಿದ್ದರಿಂದ ಇಂಗ್ಲೆಂಡ್ ತಂಡವನ್ನು ಲಿಯಾಮ್ ಡಾಸನ್ ಸೇರಿಕೊಂಡರು.
ಇಂಗ್ಲೆಂಡ್ ವಿರುದ್ದದ ಮೂರನೇ ಟೆಸ್ಟ್ ಪಂದ್ಯದ ವೇಳೆ ಲಿಯಾಮ್ ಡಾಸನ್ ಬೌಲಿಂಗ್ ಮಾಡುವ ವೇಳೆ ಶೋಯೆಬ್ ಬಶೀರ್ ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಇವರು ಎರಡನೇ ಇನಿಂಗ್ಸ್‌ನಲ್ಲಿ ಹೆಚ್ಚಿನ ಬೌಲಿಂಗ್ ಮಾಡಲಿಲ್ಲ. ಅಲ್ಲದೆ ಬ್ಯಾಟಿಂಗ್ ಮಾಡುವ ವೇಳೆಯೂ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಬಶೀರ್ ಅವರ ಬದಲಿಗೆ ಲಿಯಾಮ್ ಡಾಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಲಿಯಾಮ್ ಡಾಸನ್ ಕಳೆದ 8 ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದಾರೆ.

35 ವರ್ಷದ ಭರವಸೆಯ ಆಟಗಾರ ಲಿಯಾಮ್ ಡಾಸನ್ ಇಂಗ್ಲೆಂಡ್ ಪರ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರು ಈ ವೇಳೆ 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ 2017ರಲ್ಲಿ ಆಡಿದ್ದರು. ಅಂದಿನಿಂದ ಇಂಗ್ಲೆಂಡ್ ತಂಡದಲ್ಲಿ ಇವರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಈಗ ಬಶೀರ್ ಗಾಯಕ್ಕೆ ತುತ್ತಾಗಿದ್ದರಿಂದ ಇವರಿಗೆ ಅವಕಾಶ ಸಿಕ್ಕಿದೆ.
ಉಳಿಂದತೆ ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಗೆಲುವು ಸಾಧಿಸುವ ಇರಾದೆ ಇಂಗ್ಲೆಂಡ್ ತಂಡದ್ದಾಗಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಬಾಕಿ ಇರುವಂತೆ ಸರಣಿಯನ್ನು ಗೆದ್ದು ಕೊಳ್ಳುವ ಇರಾದೆಯನ್ನು ಇಂಗ್ಲೆಂಡ್ ಹಾಕಿಕೊಂಡಿದೆ.

ನಾಲ್ಕನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ಲಿಯಾಮ್ ಡಾಸನ್, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್
ಈಗಾಗಲೇ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸುತ್ತಿದೆ. ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಅಮೋಘ ಜಯ ಸಾಧಿಸಿತ್ತು. ಆದರೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡ ಸ್ಥಿರ ಪ್ರದರ್ಶನ ನೀಡಿದ ಪರಿಣಾಮ, ಗಿಲ್ ಪಡೆ ಜಯ ಸಾಧಿಸಿತು. ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಎರಡೂ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಆದರೆ ಇಂಗ್ಲೆಂಡ್ 22 ರನ್‌ಗಳಿಂದ ಮೂರನೇ ಟೆಸ್ಟ್ ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಜುಲೈ 23 ರಂದು ನಡೆಯಲಿರುವ ನಾಲ್ಕನೇ ಟೆಸ್ಟ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.