ಐಪಿಎಲ್ 18ನೇ ಸೀಸನ್ ಮಾರ್ಚ್ 22 ರಂದು ಪ್ರಾರಂಭವಾಗಲಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ) ತಂಡಗಳು ಮುಖಾಮುಖಿಯಾಗಲಿವೆ. ಇದುವರೆಗೆ 17 ಐಪಿಎಲ್ ಸೀಸನ್‌ಗಳಲ್ಲಿ 8 ನಾಯಕರು ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಈ ಟೀಮ್ ಇಂಡಿಯಾ ದಿಗ್ಗಜ ಆಟಗಾರರು ತಲಾ 5 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಹೊರತುಪಡಿಸಿ, ಇತರ ಸ್ಟಾರ್ ಆಟಗಾರರು ಕೂಡ ತಮ್ಮ ತಂಡಗಳಿಗೆ ಐಪಿಎಲ್ ಪ್ರಶಸ್ತಿ ಗೆಲ್ಲಿಸಿ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಐಪಿಎಲ್ ಪ್ರಶಸ್ತಿ ಗೆದ್ದ ಚಾಂಪಿಯನ್ ನಾಯಕರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಎಂಎಸ್ ಧೋನಿ ಒಬ್ಬರು. ಅತಿ ಹೆಚ್ಚು ಟ್ರೋಫಿಗಳನ್ನು ಗೆದ್ದ ಆಟಗಾರ ಎಂಬ ಹೆಗ್ಗಳಿಕೆ ಧೋನಿ ಪಾತ್ರರಾಗಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಆಗಿ ಮಾಡಿದ್ದಾರೆ. ಇದಲ್ಲದೆ, ಅವರ ತಂಡವು 5 ಬಾರಿ ರನ್ನರ್ ಅಪ್ ಆಗಿದೆ. ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ 2010, 2011, 2018, 2021 ಮತ್ತು 2023 ರಲ್ಲಿ ತಂಡವನ್ನು ಚಾಂಪಿಯನ್ ಮಾಡಿದರೆ, 2008, 2012, 2013, 2015 ಮತ್ತು 2019 ರಲ್ಲಿ ಫೈನಲ್‌ನಲ್ಲಿ ಚೆನ್ನೈ ಸೋತಿತು.
ಮುಂಬೈ ಇಂಡಿಯನ್ಸ್ ಯಶಸ್ವಿ ನಾಯಕ ರೋಹಿತ್ ಶರ್ಮಾ ಕೂಡ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಮುಂಬೈ ತಂಡ 2013, 2015, 2017, 2019 ಮತ್ತು 2023 ರಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈಗ ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ.

ಧೋನಿ ಮತ್ತು ರೋಹಿತ್ ನಂತರ, ಗೌತಮ್ ಗಂಭೀರ್ ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕ. ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎರಡು ಬಾರಿ ಚಾಂಪಿಯನ್ ಮಾಡಿದ್ದಾರೆ. ಅವರ ನಾಯಕತ್ವದಲ್ಲಿ ತಂಡವು 2012 ಮತ್ತು 2014 ರಲ್ಲಿ ಪ್ರಶಸ್ತಿಯನ್ನು ಗೆದ್ದಿದೆ.
ಐಪಿಎಲ್ 2008ರ ಮೊದಲ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇದಾದ ನಂತರ ರಾಜಸ್ಥಾನ ತನ್ನ ಎರಡನೇ ಪ್ರಶಸ್ತಿಗಾಗಿ ಕಾಯುತ್ತಿದೆ.

ಆಸ್ಟ್ರೇಲಿಯಾದ ಮಾಜಿ ದಿಗ್ಗಜ ನಾಯಕ ಆಡಮ್ ಗಿಲ್‌ಕ್ರಿಸ್ಟ್ ಕೂಡ ಐಪಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಅವಕಾಶ ಪಡೆದಿದ್ದಾರೆ. ಅವರು 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಚಾಂಪಿಯನ್ ಮಾಡಿದರು. ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಡೆಕ್ಕನ್ ಸೋಲಿಸಿತು. ಈ ತಂಡವು 2012 ರಲ್ಲಿ ಐಪಿಎಲ್ ಪಯಣವನ್ನು ಮುಗಿಸಿತು.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಚಾಂಪಿಯನ್ ಪಟ್ಟಕ್ಕೆರಿಸಿದ್ದರು. ವಾರ್ನರ್ ಎಸ್‌ಆರ್‍ಹೆಚ್ ತಂಡದ ನಾಯಕರಾಗಿದ್ದರು. ಫೈನಲ್‌ನಲ್ಲಿ ಸನ್‌ರೈಸರ್ಸ್ ತಂಡ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತು.
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 2022 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಗುಜರಾತ್ ಟೈಟಾನ್ಸ್ ಸೇರಿಕೊಂಡರು. ಈ ಸೀಸನ್‌ನಲ್ಲಿ ಗುಜರಾತ್ ಜೊತೆಗೆ ಲಕ್ನೋ ಸೂಪರ್ ಜೈಂಟ್ಸ್ ಕೂಡ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದವು. ಹಾರ್ದಿಕ್ ಗುಜರಾತ್ ಟೈಟಾನ್ಸ್ ತಂಡವನ್ನು ತನ್ನ ಮೊದಲ ಸೀಸನ್‌ನಲ್ಲಿಯೇ ಚಾಂಪಿಯನ್ ಮಾಡಿ ಸೈ ಎನಿಸಿಕೊಂಡಿದ್ದರು. ನಂತರ ಅವರ ನಾಯಕತ್ವದಲ್ಲಿ ಗುಜರಾತ್ 2023 ರಲ್ಲಿ ಫೈನಲ್ ತಲುಪಿತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಹಾರ್ದಿಕ್ 2023 ರ ಕೊನೆಯಲ್ಲಿ ಗುಜರಾತ್ ತೊರೆದು ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದರು. ಅವರು ಈಗ ಮುಂಬೈ ತಂಡದ ನಾಯಕರಾಗಿದ್ದು, ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ಭಾರತದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದರು. ಅವರಿಗೆ ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶ ಸಿಕ್ಕಿತು. ಫೈನಲ್‌ನಲ್ಲಿ ಕೋಲ್ಕತ್ತಾ ತಂಡವು ಸನ್‌ರೈಸರ್ಸ್ ಹೈದರಾಬಾದ್ ಸೋಲಿಸಿತು. ಅಯ್ಯರ್ ಈಗ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದು, ಚೊಚ್ಚಲ ಪ್ರಶಸ್ತಿ ತಂದು ಕೊಡಲು ಸಜ್ಜಾಗಿದ್ದಾರೆ.