ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿ ಐಪಿಎಲ್ 2025ರ ಟೂರ್ನಿಗೆ ಭಾರತ ತಂಡದ ಅನುಭವಿ ಆಟಗಾರ ಅಜಿಂಕ್ಯ ರಹಾನೆ ಅವರನ್ನು ನಾಯಕನನ್ನಾಗಿ ಮಾಡಿದೆ. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕೆಕೆಆರ್ ತಂಡವು ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಕಳೆದ ಋತುವಿನಲ್ಲಿ ಕೆಕೆಆರ್ ತಂಡವು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಚಾಂಪಿಯನ್ ಅಗಿತ್ತು. ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೆಕೆಆರ್ ಸೋಲಿಸಿತು. ಇಲ್ಲಿಯವರೆಗೆ ಐಪಿಎಲ್‌ನ 10 ತಂಡಗಳಲ್ಲಿ 9 ತಂಡಗಳ ನಾಯಕರ ಹೆಸರನ್ನು ಘೋಷಿಸಲಾಗಿದೆ. ಈ ಕುರಿತು ಎಲ್ಲಾ ನಾಯಕರ ಬಗ್ಗೆ ಇಲ್ಲಿದೆ ಮಾಹಿತಿ.
ಐದು ಬಾರಿ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಆಡಲಿದೆ. ಕಳೆದ ಋತುವಿನಲ್ಲಿ ಋತುರಾಜ್ ಗಾಯಕ್ವಾಡ್ ಸಿಎಸ್‌ಕೆ ತಂಡದ ನಾಯಕರಾದರು. ಎಂಎಸ್ ಧೋನಿ ರಾಜೀನಾಮೆ ನೀಡಿದ ನಂತರ ಗಾಯಕ್ವಾಡ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. 2023ರಲ್ಲಿ ಸಿಎಸ್‌ಕೆ ತಂಡವನ್ನು ಚಾಂಪಿಯನ್ ಮಾಡಿದ ನಂತರ ಧೋನಿ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಕಳೆದ ಋತುವಿನಲ್ಲಿ ಋತುರಾಜ್ ನಾಯಕತ್ವದಲ್ಲಿ ಚೆನ್ನೈ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿತ್ತು.

ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಫಾಫ್ ಡು ಪ್ಲೆಸಿಸ್ ಅವರನ್ನು ಉಳಿಸಿಕೊಂಡಿಲ್ಲ. ಮುಂದಿನ ಋತುವಿಗೆ ಆರ್‌ಸಿಬಿ ಯುವ ಬ್ಯಾಟರ್ ರಜತ್ ಪಟಿದಾರ್ ಅವರನ್ನು ನಾಯಕರನ್ನಾಗಿ ನೇಮಿಸಿದೆ. ವಿರಾಟ್ ಕೊಹ್ಲಿಯಂತಹ ಅನುಭವಿ ಆಟಗಾರರ ಬೆಂಬಲದೊಂದಿಗೆ ಅವರು ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಐಪಿಎಲ್ 2016ರ ಚಾಂಪಿಯನ್ ತಂಡ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಅನ್ನು ಮತ್ತೊಮ್ಮೆ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಮುನ್ನಡೆಸಲಿದ್ದಾರೆ. ಕಳೆದ ಋತುವಿನಲ್ಲಿ ಕಮಿನ್ಸ್ ಎಸ್‌ಆರ್‌ಹೆಚ್ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಆದರೆ, ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು.
ಐಪಿಎಲ್ ಇತಿಹಾಸದಲ್ಲಿ 5 ಬಾರಿಯ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲಿದೆ. ಕಳೆದ ಋತುವಿನಲ್ಲಿ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಇದಾದ ನಂತರ ಫ್ರಾಂಚೈಸಿಯನ್ನು ಬಹಳಷ್ಟು ಟೀಕಿಸಲಾಯಿತು. ಹಾರ್ದಿಕ್ ಕೂಡ ವಾಂಖೆಡೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಂದ ಅವಮಾನವನ್ನು ಎದುರಿಸಬೇಕಾಯಿತು. ತಂಡದ ಪ್ರದರ್ಶನವೂ ನಿರಾಶಾದಾಯಕವಾಗಿತ್ತು. ಪರಿಣಾಮ ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು.
ಶುಭಮನ್ ಗಿಲ್ ಮತ್ತೊಮ್ಮೆ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಕಳೆದ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೇರಿದ ನಂತರ ಅವರು ಗುಜರಾತ್ ಟೈಟಾನ್ಸ್ ತಂಡದ ನಾಯಕರಾದರು. ಗಿಲ್ ನಾಯಕ್ವದಲ್ಲಿ ತಂಡದ ಪ್ರದರ್ಶನ ಅಷ್ಟೊಂದು ಚೆನ್ನಾಗಿರಲಿಲ್ಲ. ಪಾಯಿಂಟ್ಸ್ ಪಟ್ಟಿಯಲ್ಲಿ ಗುಜರಾತ್ ಎಂಟನೇ ಸ್ಥಾನ ಪಡೆದಿತ್ತು.
2008 ರಲ್ಲಿ ಪ್ರಶಸ್ತಿ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡವು ಮತ್ತೆ ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದೆ. ಸ್ಯಾಮ್ಸನ್ ತಮ್ಮ ನಾಯಕತ್ವದಿಂದ ಐಪಿಎಲ್‌ನಲ್ಲಿ ಭಾರೀ ಸದ್ದು ಮಾಡಿದ್ದು, ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ದಿದ್ದಾರೆ. ರಾಜಸ್ಥಾನ 2022 ರಲ್ಲಿ ಫೈನಲ್ ತಲುಪಿತ್ತು. ಇದಾದ ನಂತರ ತಂಡವು 2023 ರಲ್ಲಿ ಐದನೇ ಸ್ಥಾನ ಮತ್ತು 2024 ರಲ್ಲಿ ಮೂರನೇ ಸ್ಥಾನ ಗಳಿಸಿತು.
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮುಂಬರುವ ಋತುವಿಗೆ ಅಜಿಂಕ್ಯ ರಹಾನೆ ಅವರನ್ನು ಹೊಸ ನಾಯಕನನ್ನಾಗಿ ನೇಮಿಸಿದೆ. ರಹಾನೆಗೆ ಐಪಿಎಲ್‌ನಲ್ಲಿ ನಾಯಕತ್ವದ ಸಾಕಷ್ಟು ಅನುಭವವಿದೆ. ಅವರು ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ದರು. ಹಾಲಿ ಚಾಂಪಿಯನ್ ಕೋಲ್ಕತ್ತಾ ತಂಡ ವೆಂಕಟೇಶ್ ಅಯ್ಯರ್ ಅವರನ್ನು ಉಪನಾಯಕನನ್ನಾಗಿ ಘೋಷಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನ ನಾಯಕ ಕೆಎಲ್ ರಾಹುಲ್ ಅವರನ್ನು ಐಪಿಎಲ್ 2025ರ ಟೂರ್ನಿಗೆ ಉಳಿಸಿಕೊಂಡಿಲ್ಲ. ಅವರ ನಿರ್ಗಮನದ ನಂತರ, ಲಕ್ನೋ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು 27 ಕೋಟಿ ರೂ.ಗೆ ಖರೀದಿಸಿತು. ಪಂತ್‌ಗೆ ನಾಯಕತ್ವದ ಜವಾಬ್ದಾರಿಯನ್ನೂ ನೀಡಲಾಗಿದೆ. ಅವರು ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು.
ಪಂಜಾಬ್ ಕಿಂಗ್ಸ್ ತಂಡ ಶ್ರೇಯಸ್ ಅಯ್ಯರ್ ಅವರನ್ನು ಹೊಸ ನಾಯಕನನ್ನಾಗಿ ಮಾಡಿದೆ. ಫ್ರಾಂಚೈಸಿ ಅವರನ್ನು 26.75 ಕೋಟಿ ರೂ.ಗೆ ಖರೀದಿಸಿತ್ತು. ಕಳೆದ ವರ್ಷ ಅಯ್ಯರ್ ತಮ್ಮ ನಾಯಕತ್ವದಲ್ಲಿ ಕೋಲ್ಕತ್ತಾ ತಂಡವನ್ನು ಚಾಂಪಿಯನ್ ಆಗಿ ಮಾಡಿದ್ದರು. ಕಳೆದ ಋತುವಿನಲ್ಲಿ ಪಂಜಾಬ್ ತಂಡಕ್ಕೆ ಶಿಖರ್ ಧವನ್ ನಾಯಕರಾಗಿದ್ದರು. ಆದರೆ ಈಗ ಅವರು ನಿವೃತ್ತರಾಗಿದ್ದಾರೆ. ರಿಕಿ ಪಾಂಟಿಂಗ್ ಕೂಡ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದ್ದಾರೆ.
ರಿಷಭ್ ಪಂತ್ ನಿರ್ಗಮನದ ನಂತರ ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕನ ಹೆಸರನ್ನು ಇನ್ನೂ ಘೋಷಿಸಿಲ್ಲ. ಪಂತ್ ಈಗ ಲಕ್ನೋ ತಂಡವನ್ನು ಸೇರಿಕೊಂಡಿದ್ದಾರೆ. ನಾಯಕತ್ವಕ್ಕಾಗಿ ಡೆಲ್ಲಿ ತಂಡಕ್ಕೆ 3 ಆಯ್ಕೆಗಳಿವೆ. ಕೆಎಲ್ ರಾಹುಲ್, ಅಕ್ಸರ್ ಪಟೇಲ್ ಮತ್ತು ಫಾಫ್ ಡು ಪ್ಲೆಸಿಸ್ ಇವರಲ್ಲಿ ಯಾರನ್ನಾದರೂ ನಾಯಕನನ್ನಾಗಿ ಮಾಡಬಹುದು.