ಆಸ್ಟ್ರೇಲಿಯಾದ ಆಟಗಾರರು ನಿರ್ಮಿಸಿರುವ ಈ 5 ದಾಖಲೆಗಳನ್ನು ಇತರರು ಮುರಿಯುವುದು ಕನಸು!

ಕ್ರಿಕೆಟ್ ಜಗತ್ತು ಕಂಡ ಹಲವಾರು ಶ್ರೇಷ್ಠ ಆಟಗಾರರನ್ನು ಹುಟ್ಟುಹಾಕಿರುವ ಆಸ್ಟ್ರೇಲಿಯಾ ಕ್ರಿಕೆಟ್‍ನಲ್ಲಿ ತನ್ನದೇ ಆದ ಹಲವು ವಿಭಿನ್ನ ದಾಖಲೆಗಳನ್ನು ನಿರ್ಮಿಸಿದೆ. ಇಲ್ಲಿಯವರೆಗೂ ನಡೆದಿರುವ ಒಟ್ಟಾರೆ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ 5 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಆಸ್ಟ್ರೇಲಿಯಾ ಅತಿ ಹೆಚ್ಚು ಬಾರಿ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಗೆದ್ದಿರುವ ತಂಡ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
ಆಸ್ಟ್ರೇಲಿಯಾ ತಂಡವನ್ನು ಮಣಿಸುವುದು ತೀರಾ ಕಷ್ಟ ಎಂಬ ಮನೋಭಾವನೆಯನ್ನು ಎದುರಾಳಿ ತಂಡದ ಅಭಿಮಾನಿಗಳ ಮನಸ್ಸಿನಲ್ಲಿ ಹಲವಾರು ವರ್ಷಗಳ ಕಾಲ ಸತತವಾಗಿ ಉಳಿಯುವಂಥ ಪ್ರದರ್ಶನವನ್ನು ನೀಡಿದ ಆಸ್ಟ್ರೇಲಿಯಾದ ಆಟಗಾರರು ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ವಿಭಿನ್ನ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಹೀಗೆ ಆಸ್ಟ್ರೇಲಿಯಾ ಆಟಗಾರರು ತಮ್ಮ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ಹೊಂದಿದ್ದು, ಈ ಪೈಕಿ ಕೆಲವು ಆಟಗಾರರ ದಾಖಲೆಯನ್ನು ಮಾತ್ರ ಬೇರೆ ಆಟಗಾರರು ಮುರಿಯುತ್ತಾರೆ ಎಂಬುದನ್ನು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ. ಹೀಗೆ ಮುರಿಯಲು ತೀರಾ ಕಷ್ಟದ ದಾಖಲೆಗಳನ್ನು ಹೊಂದಿರುವ ಆಸ್ಟ್ರೇಲಿಯಾ ಆಟಗಾರರು ಮತ್ತು ಆ ದಾಖಲೆಗಳ ಕುರಿತಾದ ವಿವರ ಮುಂದೆ ಇದೆ ಓದಿ.

1. ಸರ್ ಡಾನ್ ಬ್ರಾಡ್ಮನ್ ಅವರ ಟೆಸ್ಟ್ ಸರಾಸರಿ
ಸರ್ ಡಾನ್ ಬ್ರಾಡ್ಮನ್ ಆಸ್ಟ್ರೇಲಿಯಾ ಕ್ರಿಕೆಟ್ ಜಗತ್ತಿಗೆ ನೀಡಿದ ಅತ್ಯದ್ಭುತ ಕೊಡುಗೆ ಎಂದೇ ಹೇಳಬಹುದು. 52 ಟೆಸ್ಟ್ ಪಂದ್ಯಗಳನ್ನಾಡಿ 6996 ರನ್ ಕಲೆಹಾಕಿರುವ ಸರ್ ಡಾನ್ ಬ್ರಾಡ್ಮನ್ 99.94ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲಿಯೇ ಬ್ಯಾಟ್ಸ್‌ಮನ್ ಓರ್ವ ಹೊಂದಿರುವ ಅತಿಹೆಚ್ಚು ಸರಾಸರಿಯಾಗಿದೆ. ಸರ್ ಡಾನ್ ಬ್ರಾಡ್ಮನ್ ಅವರ ಹೆಸರಿನಲ್ಲಿರುವ ಈ ದಾಖಲೆಯನ್ನು ಮುರಿಯುವುದು ಇತರೆ ಆಟಗಾರರಿಗೆ ಸುಲಭದ ಮಾತಲ್ಲ.

2. ಶೇನ್ ವಾರ್ನ್ ಅವರ ಶತಕ ರಹಿತ ಅತಿ ಹೆಚ್ಚು ಟೆಸ್ಟ್ ರನ್
ಶೇನ್ ವಾರ್ನ್ 154 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 3154 ರನ್ ಕಲೆ ಹಾಕಿದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿದರು. ತನ್ನ 16 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಯಾವುದೇ ಶತಕ ಬಾರಿಸದೇ ಅತಿ ಹೆಚ್ಚು ಟೆಸ್ಟ್ ರನ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಶೇನ್ ವಾರ್ನ್ ಹೆಸರಿನಲ್ಲಿರುವ ಈ ದಾಖಲೆಯನ್ನು ಇತರೆ ಆಟಗಾರರು ಮುರಿಯುವುದು ಕಷ್ಟ ಸಾಧ್ಯ.

3. ಸತತ 3 ವಿಶ್ವಕಪ್
1999, 2003 ಮತ್ತು 2007ರ ವಿಶ್ವಕಪ್ ಟೂರ್ನಿಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಆಸ್ಟ್ರೇಲಿಯಾದ ಸತತ 3 ವಿಶ್ವಕಪ್ ಟೂರ್ನಿಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ತಂಡ ಎಂಬ ದಾಖಲೆಯನ್ನು ಬರೆದಿದೆ. ಹೀಗೆ ಸತತ 3 ಬಾರಿ ವಿಶ್ವಕಪ್ ಗೆದ್ದ ದಾಖಲೆಯನ್ನು ಯಾವ ತಂಡವೂ ಕೂಡಾ ಮಾಡಿಲ್ಲ. ಅಷ್ಟೇ ಯಾಕೆ ಒಟ್ಟಾರೆಯಾಗಿ 3 ಬಾರಿ ಕೂಡ ಯಾವ ತಂಡವು ವಿಶ್ವಕಪ್ ಗೆದ್ದಿಲ್ಲ. 1999ರ ವಿಶ್ವಕಪ್ ಟ್ರೋಫಿಯನ್ನು ಸ್ಟೀವ್ ವಾ ನಾಯಕತ್ವದಲ್ಲಿ ಗೆದ್ದಿದ್ದ ಆಸ್ಟ್ರೇಲಿಯಾ 2003 ಮತ್ತು 2007ರಲ್ಲಿ ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಗೆದ್ದಿತ್ತು.

4. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್
ವಿಶ್ವಕಪ್ ಟೂರ್ನಿಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಆಸ್ಟ್ರೇಲಿಯಾದ ಖ್ಯಾತ ಬೌಲರ್ ಗ್ಲೆನ್ ಮೆಕ್ ಗ್ರಾಥ್ ಹೊಂದಿದ್ದಾರೆ. 1996ರಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಗ್ಲೆನ್ ಮೆಕ್ ಗ್ರಾಥ್ ಒಟ್ಟು 4 ವಿಶ್ವಕಪ್ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ 3.96ರ ಎಕಾನಮಿ ದರದಲ್ಲಿ ಗ್ಲೆನ್ ಮೆಕ್ ಗ್ರಾತ್ 71 ವಿಕೆಟ್‍ಗಳನ್ನು ಪಡೆದುಕೊಂಡು ವಿಶ್ವಕಪ್ ಟೂರ್ನಿಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.

5. ರಿಕಿ ಪಾಂಟಿಂಗ್ - ನಾಯಕನಾಗಿ ಅತಿ ಹೆಚ್ಚು ಏಕದಿನ ಪಂದ್ಯ
ನಾಯಕತ್ವವನ್ನು ಯಶಸ್ವಿಯಾಗಿ ಅತಿಹೆಚ್ಚು ಪಂದ್ಯಗಳವರೆಗೆ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ತಂಡವು ಆಟಗಾರನ ನಾಯಕತ್ವದಲ್ಲಿ ವಿಫಲವಾದರೆ ನಾಯಕತ್ವದಿಂದ ಕೆಳಗಿಳಿಯುವಂತೆ ಒತ್ತಡಗಳೂ ಹೆಚ್ಚಾಗುತ್ತವೆ. ಹೀಗಿರುವಾಗ ರಿಕಿ ಪಾಂಟಿಂಗ್ ಮಾತ್ರ 230 ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ಕಣಕ್ಕಿಳಿದಿದ್ದಾರೆ. ಸತತ 2 ವಿಶ್ವಕಪ್ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಚಾಂಪಿಯನ್ ಆಗಿ ಮಾಡಿದ್ದ ರಿಕಿ ಪಾಂಟಿಂಗ್ ಇಷ್ಟು ಪಂದ್ಯಗಳಲ್ಲಿ ಯಶಸ್ವಿಯಾಗಿ ನಾಯಕನಾಗಿ ಕಣಕ್ಕಿಳಿಯಲು ಸಾಧ್ಯವಾಯಿತು ಎನ್ನಬಹುದು. ಪಾಂಟಿಂಗ್ ಅವರ ಈ ಬೃಹತ್ ದಾಖಲೆಯನ್ನು ಮುರಿಯುವುದು ಇತರೆ ಆಟಗಾರರಿಗೆ ಅತೀ ಕಷ್ಟವೇ ಸರಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications