
ಹೊಸ ಆಯ್ಕೆ ಸಮಿತಿಗೆ ಘಟಾನುಘಟಿಗಳಿಂದ ಅರ್ಜಿ
ಹೊಸ ಆಯ್ಕೆ ಸಮಿತಿಗೆ ಘಟಾನುಘಟಿಗಳು ಅರ್ಜಿಯನ್ನು ಸಲ್ಲಿಸಿದ್ದರು. ಮಾಜಿ ಅಲ್ ರೌಂಡರ್ ಅಜಿತ್ ಅಗರ್ಕರ್, ನಯನ್ ಮೋಂಗಿಯಾ, ಕನ್ನಡಿಗ ವೆಂಕಟೇಶ್ ಪ್ರಸಾದ್, ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ , ರಾಜೇಶ್ ಚೌಹಾಣ್, ಅಮೆ ಕುರಾಸಿಯಾ ಕೂಡ ಅರ್ಜಿಯನ್ನು ಸಲ್ಲಿಸಿದ್ದರು. ಈ ಪೈಕಿ ನಾಲ್ವರನ್ನು ಈಗ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಇಬ್ಬರು ಸಿಎಸಿ ಸೇರಲಿದ್ದಾರೆ. ಮದನ್ ಲಾಲ್, ಆರ್ ಪಿ ಸಿಂಗ್ ಹಾಗೂ ಸುಲಕ್ಷಣಾ ನೇಲ್ ಅವರಿರುವ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಗೆ ಇಬ್ಬರು ಆಯ್ಕೆದಾರರು ಹೊಸದಾಗಿ ಸೇರಲಿದ್ದಾರೆ.

ಆಯ್ಕೆ ಸಮಿತಿ ಮಾನದಂಡವೇನು?
ಬಿಸಿಸಿಐ ನಿಯಮದ ಪ್ರಕಾರ ಬಂದಿರುವ ಅರ್ಜಿಗಳಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪ್ರತಿನಿಧಿಸಿರುವ ಹಿರಿಯ ವ್ಯಕ್ತಿ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗಲಿದ್ದಾರೆ. ಪುರುಷರ ಹಿರಿಯರ ತಂಡಕ್ಕೆ ಆಯ್ಕೆದಾರರಾಗಬೇಕಾದರೆ ಕನಿಷ್ಠ 7 ಟೆಸ್ಟ್ ಪಂದ್ಯಗಳನ್ನು ಅಥವಾ 30 ಫಸ್ಟ್ ಕ್ಲಾಸ್ ಆಟವನ್ನು ಆಡಿರಬೇಕು ಅಥವಾ 10 ಅಂತಾರಾಷ್ಟ್ರೀಯ ಏಕದಿನ ಮತ್ತು 20 ಫಸ್ಟ್ ಕ್ಲಾಸ್ ಪಂದ್ಯಗಳನ್ನು ಆಡಿರಲೇಬೇಕು ಎಂಬ ನಿಯಮವಿದೆ. ಹಿರಿಯರ ಮಹಿಳಾ ತಂಡಕ್ಕೆ ಆಯ್ಕೆಗಾರರಾಗಬೇಕಾದರೆ ಅಂತಾರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರಲೇಬೇಕು. ಕಿರಿಯರ ತಂಡದ ಆಯ್ಕೆಗಾರರ ತಂಡ ಸೇರಬೇಕಾದರೆ ಕನಿಷ್ಟ 25 ಫಸ್ಟ್ ಕ್ಲಾಸ್ ಪಂದ್ಯಗಳನ್ನು ಆಡಿರಬೇಕು ಎಂಬ ನಿಯಮಗಳು ಇದೆ.

ಲಕ್ಷ್ಮಣ್ ಶಿವರಾಮಕೃಷ್ಣನ್
ಆಯ್ಕೆ ಸಮಿತಿ ಸೇರಲು ಬಯಸಿರುವ ಅತ್ಯಂತ ಹಿರಿಯ ಅರ್ಜಿದಾರರಾಗಿದ್ದಾರೆ. ಲೆಗ್ ಸ್ಪಿನ್ ಮೂಲಕ ಕ್ರಿಕೆಟ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಭಾರತ ಪರ 9 ಟೆಸ್ಟ್ ಪಂದ್ಯ ಹಾಗೂ 16 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 26 ಹಾಗೂ 15 ವಿಕೆಟ್ ಗಳಿಸಿದ್ದಾರೆ. ಪಂದ್ಯದ ವೀಕ್ಷಕವಿವರಣೆಗಾರರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.

ವೆಂಕಟೇಶ್ ಪ್ರಸಾದ್
ಕರ್ನಾಟಕ ಮೂಲದ ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ಮಧ್ಯಮ ವೇಗಿ, ಕಿರಿಯ ತಂಡ ಕೋಚ್, ಆಯ್ಕೆ ಸಮಿತಿ ಸದಸ್ಯರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ. ಅರ್ಜಿದಾರರ ಪೈಕಿ ಹೆಚ್ಚಿನ ಅನುಭವ ಉಳ್ಳವರಾಗಿದ್ದು, ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಭಾರತ ಪರ 33 ಟೆಸ್ಟ್ ಹಾಗೂ 161 ಏಕದಿನ ವಿಕೆಟ್ ಪಂದ್ಯಗಳನ್ನಾಡಿದ್ದು, ಒಟ್ಟಾರೆ 292 ವಿಕೆಟ್ ಗಳಿಸಿದ್ದಾರೆ.

ಅಜಿತ್ ಅಗರ್ಕರ್
ಭಾರತ ಪರ 26 ಟೆಸ್ಟ್ ಪಂದ್ಯ 191 ಏಕದಿನ ಪಂದ್ಯವನ್ನಾಡಿದ್ದು, ಕ್ರಮವಾಗಿ 58 ವಿಕೆಟ್ ಹಾಗೂ 288 ಏಕದಿನ ಕ್ರಿಕೆಟ್ ವಿಕೆಟ್ ಪಡೆದಿದ್ದಾರೆ. 4 ಟಿ20ಐ ಕೂಡಾ ಆಡಿದ್ದಾರೆ. 2000 ಅಂತಾರಾಷ್ಟೀಯ ರನ್ ಗಳಿಸಿದ್ದಾರೆ.
ರಾಜೇಶ್ ಚೌಹಾಣ್
ಭಾರತ ತಂಡದ ಮಾಜಿ ಆಟಗಾರ ರಾಜೇಶ್ ಚೌಹಾಣ್ 21 ಟೆಸ್ಟ್ ಪಂದ್ಯಗಳನ್ನಾಡಿದ್ದು, ಭಾರತ ಪರ 1993 ರಿಂದ 1998ರ ಅವಧಿಯಲ್ಲಿ ಆಡಿದ್ದು, 76 ವಿಕೆಟ್ ಪಡೆದಿದ್ದಾರೆ.


Click it and Unblock the Notifications











