ಲಂಕಾ ಪ್ರೀಮಿಯರ್ ಲೀಗ್‌ನ (ಎಲ್‌ಪಿಎಲ್) 2023ರ ಆವೃತ್ತಿಯ ಹರಾಜು ಪ್ರಕ್ರಿಯೆ ಬುಧವಾರ, ಜೂನ್ 14ರಂದು ಕೊಲಂಬೊದ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ನಡೆಯಿತು.
ಉದ್ಘಾಟನಾ ಎಲ್‌ಪಿಎಲ್ ಹರಾಜಿಗೆ ಸಾಗರೋತ್ತರ ಸೇರಿದಂತೆ 360 ಕ್ಯಾಪ್ಡ್ ಮತ್ತು ಅನ್‌ಕ್ಯಾಪ್ಡ್ ಆಟಗಾರರು ಹೆಸರು ನೋಂದಾಯಿಸಿದ್ದರು. ಆದರೆ, ಲಭ್ಯವಿರುವ ತಂಡದ ಗಾತ್ರಗಳ ಕಾರಣದಿಂದಾಗಿ, ಚಾರು ಶರ್ಮಾ ಅವರು ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ಐದು ಫ್ರಾಂಚೈಸಿಗಳಿಗೆ ಒಟ್ಟು 94 ಆಟಗಾರರು ಸೋಲ್ಡ್ ಆಗಿದ್ದಾರೆ.

2023ರ ಜುಲೈ 30ರಿಂದ ಆಗಸ್ಟ್ 22 ರವರೆಗೆ ನಡೆಯಲಿರುವ ಎಲ್‌ಪಿಎಲ್ ಪಂದ್ಯಾವಳಿಗೆ ಪ್ರತಿಭಾವಂತ ಕ್ರಿಕೆಟಿಗರನ್ನು ಖರೀದಿಸಲು ಫ್ರಾಂಚೈಸಿಗಳು ಸ್ಪರ್ಧಿಸಿದ್ದರಿಂದ ಹರಾಜಿನಲ್ಲಿ ಕೆಲವು ರೋಚಕ ಬಿಡ್ಡಿಂಗ್ ಪೈಪೋಟಿ ಏರ್ಪಟ್ಟಿತ್ತು.
ಇತ್ತೀಚೆಗೆ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್ ಲೀಗ್ 2023 ಆಟಗಾರರ ಹರಾಜಿನಲ್ಲಿ ಅಗ್ರ ನಾಲ್ಕು ಅತ್ಯಂತ ದುಬಾರಿ ಆಟಗಾರರು ಯಾರೆಂಬುದನ್ನು ತಿಳಿದುಕೊಳ್ಳೋಣ.
ಶ್ರೀಲಂಕಾದ ಅದ್ಭುತ ಪ್ರತಿಭೆ ದಿಲ್ಶನ್ ಮಧುಶಂಕ ಅವರು ಬುಧವಾರ ಕೊಲಂಬೊದಲ್ಲಿ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್ ಲೀಗ್ 2023ರ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಜಾಫ್ನಾ ಕಿಂಗ್ಸ್ ಫ್ರಾಂಚೈಸಿ ಬಿನುರಾ ಫರ್ನಾಂಡೋರನ್ನು ಡಂಬುಲ್ಲಾ ಕಿಂಗ್ಸ್‌ಗೆ ಬಿಟ್ಟುಕೊಟ್ಟಿರಬಹುದು, ಆದರೆ ದಿಲ್ಶನ್ ಮಧುಶಂಕರನ್ನು 92,000 ಡಾಲರ್ (75.56 ಲಕ್ಷ ರೂಪಾಯಿ) ದಾಖಲೆ ಮೊತ್ತಕ್ಕೆ ಖರೀದಿಸಿದರು.
ಕೇವಲ 20,000 ಡಾಲರ್ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಎಡಗೈ ವೇಗಿ ದಿಲ್ಶನ್ ಮಧುಶಂಕ ಪಡೆಯಲು ಜಾಫ್ನಾ ಕಿಂಗ್ಸ್ ಮತ್ತು ಗಾಲೆ ಟೈಟನ್ಸ್ ನಡುವೆ ಬಿಡ್ಡಿಂಗ್ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಸ್ಪರ್ಧೆಯಲ್ಲಿ ಜಾಫ್ನಾ ಕಿಂಗ್ಸ್ ಮೇಲುಗೈ ಸಾಧಿಸಿದತು.
12 ಟಿ20 ವಿಕೆಟ್‌ಗಳನ್ನು ಪಡೆದಿರುವ ದಿಲ್ಶನ್ ಮಧುಶಂಕ ಅವರು ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಎ ವಿರುದ್ಧದ ಇತ್ತೀಚಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ, 22 ವರ್ಷದ ಯುವ ವೇಗಿ ಒಂಬತ್ತು ವಿಕೆಟ್‌ಗಳನ್ನು ಪಡೆದರು.
ಎಲ್‌ಪಿಎಲ್ 2023ರ ಹರಾಜಿನಲ್ಲಿ ಬೃಹತ್ ಮೊತ್ತವನ್ನು ಗಳಿಸಿದ ಶ್ರೀಲಂಕಾದ ಮತ್ತೊಬ್ಬ ಸ್ಟಾರ್ ಚರಿತ್ ಅಸಲಂಕಾ. ಸ್ಫೋಟಕ ಎಡಗೈ ಆಟಗಾರನನ್ನು ಹಾಲಿ ಚಾಂಪಿಯನ್ ಜಾಫ್ನಾ ಕಿಂಗ್ಸ್ 80,000 ಡಾಲರ್ (65.70 ಲಕ್ಷ ರೂಪಾಯಿ) ಮೊತ್ತಕ್ಕೆ ಖರೀದಿಸಿತು. ಇದರೊಂದಿಗೆ ಚರಿತ್ ಅಸಲಂಕಾ ಅವರು ಎಲ್‌ಪಿಎಲ್ ಹರಾಜಿನಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು.
ಚರಿತ್ ಅಸಲಂಕಾ ಅವರ ಸೇರ್ಪಡೆಯಿಂದ ಜಾಫ್ನಾ ಕಿಂಗ್ಸ್ ಫ್ರಾಂಚೈಸಿ ಅತ್ಯುತ್ತಮ ಬ್ಯಾಟಿಂಗ್ ತಂಡಗಳಲ್ಲಿ ಒಂದಾಗಿದೆ. ಈ ಫ್ರಾಂಚೈಸಿ ಈಗ ಚರಿತ್ ಅಸಲಂಕಾ, ಡೇವಿಡ್ ಮಿಲ್ಲರ್, ಶೋಯೆಬ್ ಮಲಿಕ್, ಕ್ರಿಸ್ ಲಿನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಅವರಂತಹವ ಹಿಟ್ಟರ್‌ಗಳನ್ನು ಹೊಂದಿದೆ.
ಧನಂಜಯ ಡಿ ಸಿಲ್ವಾ ಅವರು ಬುಧವಾರ ನಡೆದ ಎಲ್‌ಪಿಎಲ್ ಹರಾಜಿನಲ್ಲಿ ಮಾರಾಟವಾದ ಮೊದಲ ಆಟಗಾರನಾದರು. ಶ್ರೀಲಂಕಾದ ಸ್ಟಾರ್ ಆಲ್‌ರೌಂಡರ್ ಆಗಿರುವ ಧನಂಜಯ ಡಿ ಸಿಲ್ವಾ ಅವರನ್ನು ದಂಬುಲ್ಲಾ ಔರಾ ಫ್ರಾಂಚೈಸಿ 76,000 ಡಾಲರ್ (62.42 ಲಕ್ಷ ರೂಪಾಯಿ) ಮೊತ್ತಕ್ಕೆ ಖರೀದಿಸಿದರು.
ದಂಬುಲ್ಲಾ ಔರಾ ಫ್ರಾಂಚೈಸಿಯು ವೇಗಿ ಬಿನುರಾ ಫೆರ್ನಾಂಡೋ ಅವರನ್ನು ಪಡೆಯಲು ಅದೇ ಮೊತ್ತದ 76,000 ಡಾಲರ್ (62.42 ಲಕ್ಷ ರೂಪಾಯಿ) ಪಾವತಿಸಿತು. ಬಿನುರಾ ಫೆರ್ನಾಂಡೋ ಎತ್ತರದ ಎಡಗೈ ವೇಗಿಯಾಗಿದ್ದು, ಡೆತ್ ಓವರ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಉತ್ತಮ ಯಾರ್ಕರ್ ಕೌಶಲ್ಯವನ್ನು ಹೊಂದಿದ್ದಾರೆ.
ಧನಂಜಯ ಡಿ ಸಿಲ್ವಾ ಮತ್ತು ಬಿನೂರಾ ಫೆರ್ನಾಂಡೋ ಇಬ್ಬರೂ ಆಟಗಾರರು ಎಲ್‌ಪಿಎಲ್ 2023ರ ಹರಾಜಿನಲ್ಲಿ ಜಂಟಿ ಮೂರನೇ ಅತ್ಯಂತ ದುಬಾರಿ ಆಟಗಾರರೆನಿಸಿಕೊಂಡರು.