ಶ್ರೀಲಂಕಾ ಪ್ರೀಮಿಯರ್ ಲೀಗ್ ಜುಲೈ ತಿಂಗಳ 30ರಿಂದ ಆರಂಭವಾಗಲಿದ್ದು ಅದಕ್ಕೆ ಸಂಬಂದಿಸಿದಂತೆ ಚಟುವಟಿಕೆಗಳು ಆರಂಭವಾಗಿದೆ. ಈಗಾಗಲೇ 4ನೇ ಆವೃತ್ತಿಗಾಗಿ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದು ಎಲ್ಲಾ ತಂಡಗಳು ಕೂಡ ತಮ್ಮ ಸ್ಕ್ವಾಡ್ ಭರ್ತಿ ಮಾಡಿಕೊಂಡಿದೆ. ಇದೇ ಮೊದಲ ಬಾರಿಗೆ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಐಪಿಎಲ್ ಮಾದರಿಯಲ್ಲಿಯೇ ಹರಾಜು ಪ್ರಕ್ರಿಯೆ ನಡೆದಿದ್ದು ಕೆಲ ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜಾಗುವ ಮೂಲಕ ಸುದ್ದಿಯಾಗಿದ್ದಾರೆ.
ಎಲ್‌ಪಿಎಲ್‌ನಲ್ಲಿ 14 ಸ್ಥಳೀಯ ಆಟಗಾರರು ಮತ್ತು 6 ವಿದೇಶಿ ಆಟಗಾರರಿಗೆ ಮಾತ್ರವೇ ಸ್ಕ್ವಾಡ್‌ಗಳಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ ವಿಶ್ವ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಸ್ಟಾರ್ ಆಟಗಾರರಿಗೆ ಸಾಕಷ್ಟು ಬೇಡಿಕೆಯಿದ್ದರೂ ಕೆಲ ಪ್ರಮುಖ ಆಟಗಾರರು ಈ ಹರಾಜಿನಲ್ಲಿ ನಿರಾಸೆ ಅನುಭವಿಸಿದ್ದಾರೆ. ಅದ್ಭುತ ಪ್ರದರ್ಶನ ನೀಡಿ ಚುಟುಕು ಮಾದರಿಗೆ ಹೇಳಿ ಮಾಡಿಸಿದ ಆಟಗಾರ ಎನಿಸಿಕೊಂಡಿದ್ದರೂ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಅವಕಾಶ ಪಡೆಯಲು ವಿಫಲವಾದ ಐದು ಕ್ರಿಕೆಟಿಗರ ಬಗ್ಗೆ ಇಲ್ಲಿದೆ ಮಾಹಿತಿ.

34ರ ಹರೆಯದ ಪಾಕಿಸ್ತಾನದ ಆಲ್‌ರೌಂಡರ್ ಇಮದ್ ಖಾನ್ ಈ ಬಾರಿಯ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಹರಾಜಾಗದೆ ಉಳಿಯುವ ಮೂಲಕ ಆಘಾತ ಅನುಭವಿಸಿದ್ದಾರೆ. ಇದು ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳನ್ನು ಕೂಡ ಅಚ್ಚರಿಗೆ ದೂಡಿದೆ. 302 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಇಮದ್ ವಾಸಿಂ ಚುಟುಕು ಕ್ರಿಕೆಟ್‌ನಲ್ಲಿ 3150 ರನ್‌ಗಳನ್ನು ಗಳಿಸಿದರೆ 270 ವಿಕೆಟ್ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಡೆತ್ ಓವರ್‌ನಲ್ಲಿಯೂ ಬೌಲಿಂಗ್ ನಡೆಸುವ ಸಾಮರ್ಥ್ಯವನ್ನ ಹೊಂದಿದ್ದರು. ಆದರೆ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಯಾವ ತಂಡ ಕೂಡ ಇಮದ್ ವಾಸಿಂ ಅವರನ್ನು ಖರೀದಿಸುವ ಮನಸ್ಸು ಮಾಡಲಿಲ್ಲ.
ಲಂಕಾ ಪ್ರೀಮೊಇಯರ್ ಲೀಗ್‌ನಲ್ಲಿ ಹರಾಗಾಗದೆ ಆಘಾತ ಅನುಭವಿಸಿದ ಮತ್ತೋರ್ವ ಆಟಗಾರ ನೇಪಾಳದ ಮಾಜಿ ನಾಯಕ ಸಂದೀಪ್ ಲಮಿಚ್ಚನೆ. 136 ಟಿ20 ಪದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಸಂದೀಪ್ 193 ವಿಕೆಟ್ ಪಡೆದುಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಅನೇಕ ಲೀಗ್ ಪಂದ್ಯಗಳಲ್ಲಿ ಭಾಗಿಯಾದ ಅನುಭವ ಹೊಂದಿದ್ದಾರೆ ನೇಪಾಳದ ಈ ಆಟಗಾರ. ಇತ್ತೀಚೆಗೆ ಸಂದೀಪ್ ಲಮಿಚ್ಚನೆ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿತ್ತು. ಇದು ಅವರ ವೃತ್ತಿ ಜೀವನದ ಮೇಲೆಯೂ ಪರಿಣಾಮ ಬೀರಿದೆ.
ಬಾಂಗ್ಲಾದೇಶ ತಮಡದ ಪ್ರಮುಖ ಆಟಗಾರ ಲಿಟನ್ ದಾಸ್ ಕೂಡ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕಾಂಟ್ರಾಕ್ಟ್ ಪಡೆದುಕೊಳ್ಳುವಲ್ಲಿ ವಿಫಲವಾಗಿರುವ ಪ್ರಮುಖ ಕ್ರಿಕೆಟಿಗನಾಗಿದ್ದಾರೆ. 180 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರೂ ಕೂಡ ಐದು ಫ್ರಾಂಚೈಸಿಗಳ ನಂಬಿಕೆ ಗಳಿಸಲು ಲಿಟನ್ ದಾಸ್ ವಿಫಲವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲಿಟನ್ ದಾಸ್ ಅದ್ಭುತ ಫಾರ್ಮ್‌ನಲ್ಲಿದ್ದು ಬಾಂಗ್ಲಾದೇಶದ ಪರವಾಗಿ ಕೆಲ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಬೇರೆ ಬೇರೆ ಕ್ರಮಾಂಕದಲ್ಲಿ ಕಠಿಣ ಸಂದರ್ಭದಲ್ಲಿಯೂ ಮಿಂಚಿರುವ ಲಿಟನ್ ದಾಸ್ ಅವರನ್ನು ಯಾವ ಎಲ್‌ಪಿಎಲ್ ಫ್ರಾಂಚೈಸಿ ಕೂಡ ಖರೀದಿಸದಿರುವುದು ಅಚ್ಚರಿ ಮೂಡಿಸಿದೆ.
ಜಿಂಬಾಬ್ವೆ ತಂಡದ ಸ್ಟಾರ್ ಆಲ್‌ರೌಂಡರ್ ಸಿಕಂದರ್ ರಾಜಾ ರಾಷ್ಟ್ರೀಯ ತಂಡದ ಬೆನ್ನೆಲುಬಾಗಿದ್ದು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ತಂಡಕ್ಕೆ ಇತ್ತೀಚಿನ ವರ್ಷಗಳಲ್ಲಿ ಅಮೋಘ ಕೊಡುಗೆ ನಿಡಿಕೊಂಡು ಬಂದಿದ್ದಾರೆ. ಹೀಗಾಗಿಯೇ ಇತ್ತೀಚೆಗೆ ಅಂತ್ಯವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಸಿಕಂದರ್ ರಾಜಾ ಒಪ್ಪಂದವನ್ನು ಪಡೆದುಕೊಂಡಿದ್ದರು. ಆದರೆ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಲು ವಿಫಲವಾದ ಸಿಕಂದರ್ ರಾಜಾ ಲಂಕಾ ಪ್ರೀಮಿಯರ್‌ನಲ್ಲಿ ಯಾವುದೇ ತಂಡಕ್ಕೂ ಹರಾಜಾಗದೆ ಉಳಿದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರವಾದ ಅನುಭವ ಹೊಂದಿರುವ ನ್ಯೂಜಿಲೆಂಡ್‌ನ ಅನುಭವಿ ಆಟಗಾರ ಮಾರ್ಟಿನ್ ಗಪ್ಟಿಲ್ ಚುಟುಕು ಕ್ರಿಕೆಟ್‌ಗೆ ಹೇಳಿ ಮಾಡಿಸಿದಂತಿರುವ ಕ್ರಿಕೆಟಿಗ. 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಅವರು ನ್ಯೂಜಿಲೆಂಡ್ ಪರವಾಗಿ ಮೂರು ಮಾದರಿಯಲ್ಲಿಯೂ ಸೇರಿ ಒಟ್ಟು 267 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಇನ್ನು ವಿಶ್ವಾದ್ಯಂತ ನಡೆಯುವ ಬಹುತೇಕ ಟಿ20 ಲೀಗ್‌ಗಳಲ್ಲಿ ಭಾಗವಹಿಸುವ ಗಪ್ಟಿಲ್ 323 ಟಿ20 ಪಂದ್ಯಗಳಲ್ಲಿ ಆಡಿದ್ದು 9044 ರನ್‌ಗಳನ್ನು ಗಳಿಸಿದ್ದಾರೆ. ಆದರೆ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಯಾವ ತಂಡ ಕೂಡ ಖರೀದಿಸದೆ ಆಘಾತ ಅನುಭವಿಸಿದ್ದಾರೆ.