LSG vs DC IPL 2025: ಮಾಜಿ ತಂಡದ ವಿರುದ್ಧ ಆರ್ಭಟಿಸಿದ ಕನ್ನಡಿಗ ಕೆಎಲ್: ಡೆಲ್ಲಿಗೆ ಲಕ್ನೋ ಸುಲಭ ತುತ್ತು
ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ನಾಯಕ ಕೆಎಲ್ ರಾಹುಲ್, ತಮ್ಮ ಹಿಂದಿನ ತಂಡದ ವಿರುದ್ಧ ಆರ್ಭಟ ನಡೆಸಿದ್ದಾರೆ. ಇವರು ಹಾಗೂ ಅಭಿಷೇಕ್ ಪೋರೆಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 18ನೇ ಆವೃತ್ತಿಯ 40ನೇ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಲಕ್ನೋ ತಂಡವನ್ನು ತವರಿನಲ್ಲಿ ಮಣಿಸಿ ಅಬ್ಬರಿಸಿದೆ. ಈ ಗೆಲುವಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಲ್ಲಿ ಆರನೇ ಗೆಲುವಿನ ನಗೆ ಬೀರಿದ್ದು, 12 ಅಂಕಗಳೊಂದಿಗೆ ಎರಡನೇ ಸ್ಥಾನ ಭಧ್ರ ಪಡಿಸಿಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಡೆಲ್ಲಿ ಇನ್ನು 13 ಎಸೆತ ಬಾಕಿ ಇರುವಂತೆ 2 ವಿಕೆಟ್ ಕಳೆದುಕೊಂಡು 161 ರನ್ ಕಲೆ ಹಾಕಿ ಅಬ್ಬರದ ಜಯ ದಾಖಲಿಸಿತು. ಎಲ್‌ಎಸ್‌ಜಿ ತಂಡದ ಆರನೇ ಗೆಲುವಿನ ಕನಸು ಕಮರಿದೆ. ಆಡಿದ 9 ಪಂದ್ಯಗಳಲ್ಲಿ 5 ಜಯ ಸಾಧಿಸಿರುವ ರಿಷಭ್ ಪಂತ್ ಪಡೆ ಐದನೇ ಸ್ಥಾನದಲ್ಲಿದೆ.

ಸಾಧರಣ ಆರಂಭ
ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಸಾಧಾರಣವಾಗಿತ್ತು. ಡೆಲ್ಲಿ ತಂಡದ ಪರ ಅಭಿಷೇಕ್ ಪೋರೆಲ್ ಹಾಗೂ ಕರುಣ್ ನಯರ್ ತಂಡಕ್ಕೆ ಬಿಗ್ ಓಪನಿಂಗ್ ನೀಡುವ ಸೂಚನೆ ನೀಡಿದರು. ಆದರೆ ಈ ಜೋಡಿಗೆ ಬ್ರೇಕ್ ಹಾಕುವಲ್ಲಿ ಐಡೇನ್ ಮಾರ್ಕ್ರಾಮ್ ಸಫಲರಾದರು. ಇವರು ಕರುಣ್ ನಾಯರ್ (15 ರನ್) ಅವರಿಗೆ ಪೆವಿಲಿಯನ್ ಹಾದಿ ತೊರಿಸಿದರು. ಮೊದಲ ವಿಕೆಟ್‌ಗೆ ಆರಂಭಿಕ ಜೋಡಿ 3.4 ಓವರ್‌ಗಳಲ್ಲಿ 36 ರನ್ ಸೇರಿಸಿತು.
ಎರಡನೇ ವಿಕೆಟ್‌ಗೆ ಅಭಿಷೇಕ್ ಪೋರೆಲ್ ಹಾಗೂ ಅನುಭವಿ ಕೆಎಲ್ ರಾಹುಲ್ ಜೋಡಿ ಭರ್ಜರಿ ಜತೆಯಾಟದ ಕಾಣಿಕೆ ನೀಡಿತು. ಪೋರೆಲ್ ಪಿಚ್‌ನ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿ ಅಬ್ಬರಿಸಿದರು. ಇವರಿಗೆ ರಾಹುಲ್ ಉತ್ತಮ ಸಾಥ್ ನೀಡಿದರು. ಈ ಜೋಡಿ ಎಲ್‌ಎಸ್‌ಜಿ ಬೌಲರ್‌ಗಳನ್ನು ಕಾಡಿದರು. ಈ ಜೋಡಿ 49 ಎಸೆತಗಳಲ್ಲಿ 69 ರನ್ ಸೇರಿಸಿತು. ಈ ವೇಳೆ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಅಭಿಷೇಕ್ ಪೋರೆಲ್ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 51 ರನ್ ಬಾರಿಸಿದ್ದಾಗ ಐಡೇನ್ ಮಾರ್ಕ್ರಾಮ್ ಎಸೆತದಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಬಾಜಿ ಗೆದ್ದ ರಾಹುಲ್
ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಸಹ ಕನ್ನಡಿಗ ಕೆಎಲ್ ರಾಹುಲ್ ಅವರ ಮೇಲೆ ಇದ್ದವು. ಈ ಪಂದ್ಯದಲ್ಲಿ ಇವರು ತಮ್ಮ ಮಾಜಿ ತಂಡದ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ರಾಹುಲ್ ನಂತರ ಗೇರ್ ಶಿಫ್ಟ್ ಮಾಡಿದ್ರು. ಎಂ ಚಿನ್ನಸ್ವಾಮಿ ಅಂಗಳ, ರಾಹುಲ್‌ಗೆ ತವರಾದರೆ, ಲಕ್ನೋ ಎರಡನೇ ತವರು. ಈ ಮೈದಾನದಲ್ಲಿ ಹೇಗೆ ಆಡಬೇಕು ಎಂಬುದನ್ನು ಪಕ್ಕಾ ಅರಿತಿದ್ದ ರಾಹುಲ್ ಅಬ್ಬರಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಾಹುಲ್ 42 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 57 ರನ್ ಬಾರಿಸಿ ಮಿಂಚಿದರು. ಈ ಮೂಲಕ ರಾಹುಲ್ ತಮ್ಮನ್ನು ಕೈ ಬಿಟ್ಟಿದ್ದ ಲಕ್ನೋ ವಿರುದ್ಧ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಈ ಮೂಲಕ ರಾಹುಲ್ ಪ್ರಸಕ್ಯ ಐಪಿಎಲ್‌ನಲ್ಲಿ ತಮ್ಮ ಧಮಾಕೆದಾರ್ ಪ್ರದರ್ಶನವನ್ನು ಮುಂದುವರೆಸಿದರು. ಇದರ ಪರಿಣಾಮವೇ ಡೆಲ್ಲಿ ಕ್ಯಾಪಿಟಲ್ಸ್ ಸುಲಭ ಜಯ ಸಾಧಿಸಿತು. ಈ ಪಂದ್ಯದಲ್ಲಿ ರಾಹುಲ್ 51 ರನ್ ಬಾರಿಸುತ್ತಾ ಇದ್ದಂತೆ ಐಪಿಎಲ್ ಇತಿಹಾಸದಲ್ಲಿ ದೊಡ್ಡ ದಾಖಲೆಯನ್ನು ಬರೆದರು. ವೇಗವಾಗಿ 5 ಸಾವಿರ ರನ್ ಕಲೆ ಹಾಕಿದ ಕೀರ್ತಿಗೂ ಇವರು ಭಾಜನರಾದರು. ಈ ಮೂಲಕ ರಾಹುಲ್ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಅಳಿಸಿ ಹಾಕಿದರು.
ಡೆಲ್ಲಿ ತಂಡಕ್ಕೆ ನಾಯಕ ಅಕ್ಷರ್ ಪಟೇಲ್ ಆಧಾರವಾದರು. ಇವರು ತಮ್ಮ ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡಿ 1 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 34 ರನ್ ಸಿಡಿಸಿ ತಂಡದ ಜಯದಲ್ಲಿ ಮಿಂಚಿದರು.

ಟಾಸ್ ಸೊತರೂ ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಮಿಚೆಲ್ ಮಾರ್ಷ್ ಹಾಗೂ ಐಡೆನ್ ಮಾರ್ಕ್ರಾಮ್ ಜೋಡಿ ರಿಷಭ್ ಪಂತ್ ಪಡೆಯ ಮುಖದಲ್ಲಿ ಮಂದಹಾಸ ಮೂಡಿಸಿತು. ಈ ಜೋಡಿ ಆರಂಭದಲ್ಲಿ ಕೊಂಚ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ ಜೋಡಿ ತಾಳ್ಮೆಯಿಂದ ಬ್ಯಾಟ್ ಮಾಡಿತು. ಪವರ್ ಪ್ಲೇನಲ್ಲಿ ಲಕ್ನೋ ವಿಕೆಟ್ ನಷ್ಟವಿಲ್ಲದೆ 51 ರನ್ ಸೇರಿಸಿತು.
ಮಾರ್ಕ್ರಾಮ್ ಅರ್ಧಶತಕ
ಮಿಚೆಲ್ ಮಾರ್ಷ್ ಹಾಗೂ ಐಡೆನ್ ಮಾರ್ಕ್ರಾಮ್ ಜೋಡಿ ಸಹ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್‌ಗಳು ವಿಫಲರಾದರು. ಡೆಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾಡಿದ್ದ ಯೋಜನೆಯನ್ನು ಬುಡಮೇಲು ಮಾಡಿದ ಈ ಜೋಡಿ ಅಬ್ಬರಿಸಿತು. ಈ ಜೋಡಿ 60 ಎಸೆತಗಳಲ್ಲಿ 87 ರನ್ ಸೇರಿಸಿ ಅಬ್ಬರಿಸಿತು. ಸ್ಟಾರ್ ಆಟಗಾರ ಐಡೆನ್ ಮಾರ್ಕ್ರಾಮ್ 33 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿ ಅಬ್ಬರಿಸಿತು.
ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ನಿಕೋಲಸ್ ಪೂರನ್ ನಿರಾಸೆ ಅನುಭವಿಸಿದರು. ನಿಕೋಲಸ್, ಅನುಭವಿ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಎಸೆತದಲ್ಲಿ ಬೋಲ್ಡ್ ಆದರು. ಇನ್ನು ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಅಬ್ದುಲ್ ಸಮದ್ ಮುಕೇಶ್ ಕುಮಾರ್ ಎಸೆತದಲ್ಲಿ ಅವರಿಗೆ ಕ್ಯಾಚ್ ನೀಡಿದರು. ಆರಂಭಿಕರಾಗಿ ಉತ್ತಮ ಲಯದಲ್ಲಿ ಕಂಡು ಬಂದಿದ್ದ ಮಿಚೆಲ್ ಮಾರ್ಷ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 45 ರನ್ ಸಿಡಿಸಿ ಮುಕೇಶ್ ಕುಮಾರ್‌ಗೆ ಕ್ಯಾಚ್ ನೀಡಿದರು.
ಆಯುಷ್ ಅಬ್ಬರ
ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಆಯುಷ್ ಬದೋನಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 21 ಎಸೆತಗಳಲ್ಲಿ 171ರ ಸ್ಟ್ರೈಕ್ ರೇಟ್‌ನಲ್ಲಿ 36 ರನ್ ಸಿಡಿಸಿದರು. ಈ ವೇಳೆ 6 ಬೌಂಡರಿಗಳನ್ನು ಬಾರಿಸಿದ್ದಾರೆ. ಇನ್ನು ಡೇವಿಡ್ ಮಿಲ್ಲರ್ ಅಜೇಯ 14 ರನ್ ಬಾರಿಸಿದರು. ಎಲ್‌ಎಸ್‌ಜಿ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಕಲೆ ಹಾಕಿತು.
ಮುಕೇಶ್ ನಾಲ್ಕು ವಿಕೆಟ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಕೇಶ್ ಕುಮಾರ್ 4 ಓವರ್ ಬೌಲಿಂಗ್ ನಡೆಸಿ 33 ರನ್ ನೀಡಿ 4 ವಿಕೆಟ್ ಕಬಳಿಸಿದರು. ಮಧ್ಯಮ ಕ್ರಮಾಂಕದ ಅಬ್ದುಲ್ ಸಮದ್, ಆರಂಭಿಕ ಮಿಚೆಲ್ ಮಾರ್ಷ್, ಭರವಸೆಯ ಆಟಗಾರ ಆಯೂಷ್ ಬದೋನಿ ಹಾಗೂ ಕೊನೆಯಲ್ಲಿ ರಿಷಭ್ ಪಂತ್ ಅವರ ವಿಕೆಟ್ ಪಡೆಯುವ ಮೂಲಕ ಅಬ್ಬರಿಸಿದರು. ಇವರ ಸ್ಥಿರ ಬೌಲಿಂಗ್ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಗರಿ ಸಹ ಸಂದಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications