2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅತ್ಯಾಕರ್ಷಕ ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಕ್ಕೆ ಹೊಸ ಸ್ಫೋಟಕ ಬ್ಯಾಟರ್ ಸಿಕ್ಕಿದ್ದಾನೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಈ ಹೊಡಿಬಡಿ ಆಟಗಾರ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ.
ಆತನ ಹೆಸರು ಜೇಕ್ ಫ್ರೇಸರ್-ಮೆಕ್‌ಗುರ್ಕ್, ಆಸ್ಟ್ರೇಲಿಯಾದ ಉದಯೋನ್ಮುಖ ಕ್ರಿಕೆಟ್ ಪ್ರತಿಭೆ. ಗಾಯಗೊಂಡ ವೇಗಿ ಲುಂಗಿ ಎನ್‌ಗಿಡಿ ಬದಲಿಯಾಗಿ ಆಯ್ಕೆಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್‌ಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಮೊದಲ ಐದು ಪಂದ್ಯಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಗಲಿಲ್ಲ. ಆದರೆ ಒಮ್ಮೆ ಶುಕ್ರವಾರ ಪಡೆದ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು.

ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆಯುಷ್ ಬದೊನಿ ಅವರ ಏಕೈಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತ್ತು.
ನಂತರ 168 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫ್ರೇಸರ್-ಮೆಕ್‌ಗುರ್ಕ್ ಅವರ ಅರ್ಧಶತಕ ಮತ್ತು ರಿಷಭ್ ಪಂತ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 18.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಆಸ್ಟ್ರೇಲಿಯನ್ ಬ್ಯಾಟರ್ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ನೆನಪಿಡುವ ಚೊಚ್ಚಲ ಪಂದ್ಯವನ್ನು ಆಡಿದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಅರ್ಧಶತಕದೊಂದಿಗೆ ಸಹಾಯ ಮಾಡಿದರು.
ತಾನು ಎದುರಿಸಿದ ಎರಡನೇ ಎಸೆತದಲ್ಲೇ ಫ್ರೇಸರ್-ಮೆಕ್‌ಗುರ್ಕ್ ಅವರು ಯಶ್ ಠಾಕೂರ್ ಅವರ ಎಸೆತವನ್ನು ಡೀಪ್ ಮಿಡ್-ವಿಕೆಟ್ ಮೇಲೆ ಸಿಕ್ಸರ್‌ಗೆ ಅಟ್ಟಿದರು. ನಂತರ ಕ್ರುನಾಲ್ ಪಾಂಡ್ಯ ಅವರ ಒಂದೇ ಓವರ್‌ನಲ್ಲಿ ಸತತ ಮೂರು ಸಿಕ್ಸರ್ ಬಾರಿಸಿ ತಮ್ಮ ಛಾಪು ಮೂಡಿಸಿದರು.
ಅಂತಿಮವಾಗಿ 35 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಮೇತ 55 ರನ್‌ಗಳ ಅರ್ಧಶತಕ ಗಳಿಸಿ ಅರ್ಷದ್ ಖಾನ್ ಅವರ ಬೌಲಿಂಗ್‌ನಲ್ಲಿ ಔಟಾದರು.
ಇದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್‌ಗಳ ಗೆಲುವು ದಾಖಲಿಸಲು ಸಹಾಯ ಮಾಡಿದರು. ಐಪಿಎಲ್ 2024ರಲ್ಲಿ ಕೇವಲ ಎರಡನೇ ಜಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿಮೋಚನೆಗೊಂಡಿತು.
ಕೇವಲ 21 ವರ್ಷದ ಬ್ಯಾಟರ್ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಈಗಾಗಲೇ ಕ್ರಿಕೆಟ್‌ನಲ್ಲಿ ಅಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರುವ ಮೊದಲು, ILT20 ಪಂದ್ಯಾವಳಿಯಲ್ಲಿ ದುಬೈ ಕ್ಯಾಪಿಟಲ್ಸ್‌ಗಾಗಿ ಕೆಲವು ರೋಚಕ ಪಂದ್ಯಗಳನ್ನು ಆಡಿದರು.
ಇದೇ ವರ್ಷ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸ್ವರೂಪದಲ್ಲಿ ಆಸ್ಟ್ರೇಲಿಯಾ ಪರ ಆಡಲು ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವಕಾಶ ಪಡೆದರು. ಕೇವಲ ಎರಡು ಪಂದ್ಯಗಳಲ್ಲಿ 220ರ ಸ್ಟ್ರೈಕ್ ರೇಟ್‌ನೊಂದಿಗೆ 51 ರನ್ ಗಳಿಸುವ ಮೂಲಕ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.
ಜೇಕ್ ಫ್ರೇಸರ್-ಮೆಕ್‌ಗುರ್ಕ್ ಇನ್ನೂ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡದಿದ್ದರೂ, ದೊಡ್ಡ ಶಾಟ್‌ಗಳನ್ನು ಬಾರಿಸಲು ಹೆಸರುವಾಸಿಯಾಗಿದ್ದಾರೆ. ಮೊದಲು ಆಡಿದ ಟಿ20 ಪಂದ್ಯಗಳಲ್ಲಿ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರ ಎದ್ದು ಕಾಣುವಂತೆ ಮಾಡುವ ಒಂದು ವಿಷಯವೆಂದರೆ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ನಿರ್ಮಿಸಿರುವ ಅದ್ಭುತ ದಾಖಲೆ. 2023ರಲ್ಲಿ ಮಾರ್ಷ್ ಏಕದಿನ ಕಪ್‌ನಲ್ಲಿ ಎಬಿ ಡಿವಿಲಿಯರ್ಸ್ ಅವರ 31 ಎಸೆತಗಳ ದಾಖಲೆಯನ್ನು ಮೀರಿಸಿ, ಏಕದಿನ ಪಂದ್ಯದಲ್ಲಿ ವೇಗದ ಶತಕ ಗಳಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಹೊಂದಿದ್ದಾರೆ.
ಕೇವಲ 29 ಎಸೆತಗಳಲ್ಲಿ 13 ಸಿಕ್ಸರ್ ಮತ್ತು 10 ಬೌಂಡರಿಗಳೊಂದಿಗೆ 100 ರನ್ ಗಳಿಸಿ ದಾಖಲೆ ಸ್ಥಾಪಿಸಿದರು. ಭವಿಷ್ಯದಲ್ಲಿ ಯಾವುದೇ ತಂಡಕ್ಕೆ ದಿಕ್ಕು ಬದಲಿಸುವ ಆಟಗಾರನಾಗಿ ರೂಪುಗೊಳ್ಳುವುದರಲ್ಲಿ ಅನುಮಾನವಿಲ್ಲ.