ಲಕ್ನೋ ಸೂಪರ್ ಜೈಂಟ್ಸ್ ತಂಡದ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಶ್ರೀಲಂಕಾದ ದಿಗ್ಗಜ ವೇಗದ ಬೌಲರ್ ಲಸಿತ್ ಮಲಿಂಗಾ ಅವರ ದಾಖಲೆಯನ್ನು ಮಿಶ್ರಾ ಸರಿಗಟ್ಟಿದ್ದು ಐಪಿಎಲ್‌ನಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಲಕ್ನೋದ ಏಕಾನ ಕ್ರಿಕೆಟ್ ಮೈದಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಮೊದಲಿಗೆ ಬೌಲಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಬೌಲಿಂಗ್‌ನಲ್ಲಿ ಅದ್ಭುತ ಯಶಸ್ಸು ಸಾಧಿಸಿತು. ಈ ಸಂದರ್ಭದಲ್ಲಿ ಎರಡು ಓವರ್‌ಗಳ ಬೌಲಿಂಗ್ ದಾಳಿ ನಡೆಸಿದ ಅಮಿತ್ ಮಿಶ್ರಾ ಕೇವಲ 9 ರನ್ ನೀಡಿ ಒಂದು ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಈ ಪ್ರಮುಖ ಮೈಲಿಗಲ್ಲು ಸಾಧಿಸಿದ್ದಾರೆ.

ಸದ್ಯ ಐಪಿಎಲ್‌ನಲ್ಲಿ ಅಮಿತ್ ಮಿಶ್ರಾ 170 ವಿಕೆಟ್‌ಗಳನ್ನು ಪಡೆದುಕೊಂಡಿದ್ದು ಲಸಿತ್ ಮಲಿಂಗಾ ಅವರೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಅಭಿನವ್ ಮನೋಹರ್ ಅವರ ವಿಕೆಟ್ ಪಡೆಯುವ ಮೂಲಕ ಮಿಶ್ರಾ ಈ ಸಾಧನೆ ಮಾಡಿದರು. ಅಮಿತ್ ಮಿಶ್ರಾ ಐಪಿಎಲ್‌ನಲ್ಲಿ ಇದಕ್ಕೂ ಮುನ್ನ ಡೆಕ್ಕನ್ ಚಾರ್ಜರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಕಣಕ್ಕಿಳಿದಿದ್ದರು.
ಅಮಿತ್ ಮಿಶ್ರಾ ಐಪಿಎಲ್‌ನಲ್ಲಿ 158 ಪಂದ್ಯಗಳನ್ನು ಆಡಿದ್ದು 23.77ರ ಸರಾಸರಿಯಲ್ಲಿ 7.35 ಎಕಾನಮಿಯೊಂದಿಗೆ 170 ವಿಕೆಟ್ ಪಡೆದುಕೊಂಡಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಎಂದರೆ 17 ರನ್‌ಗಳಿಗೆ 5 ವಿಕೆಟ್. ಇನ್ನು ವೃತ್ತಿ ಜೀವನದುದ್ದಕ್ಕೂ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ನಲ್ಲಿ ಆಡಿರುವ ಲಸಿತ್ ಮಲಿಂಗಾ 122 ಪಂದ್ಯಗಳಲ್ಲಿ 19.79 ಸರಾಸರಿಯಲ್ಲಿ 7.14ರ ಎಕಾನಮಿಯಲ್ಲಿ 170 ವಿಕೆಟ್‌ಗಳು ಪಡೆದುಕೊಂಡಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ 13 ರನ್‌ಗಳಿಗೆ 5 ವಿಕೆಟ್ ಆಗಿದೆ.
ಇನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದುಕೊಂಡಿರುವ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ ಹೆಸರಿನಲ್ಲಿದೆ. ಬ್ರಾವೋ ಐಪಿಎಲ್‌ನಲ್ಲಿ 161 ಪಂದ್ಯಗಳನ್ನು ಆಡಿದ್ದು 23.82 ಸರಾಸರಿಯಲ್ಲಿ 8.38ರ ಎಕಾನಮಿಯೊಂದಿಗೆ 183 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಯುಜುವೇಂದ್ರ ಚಾಹಲ್ ಇದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬದೋನಿ, ನವೀನ್-ಉಲ್-ಹಕ್, ಅಮಿತ್ ಮಿಶ್ರಾ, ಅವೇಶ್ ಖಾನ್, ರವಿ ಬಿಷ್ಣೋಯ್
ಬೆಂಚ್: ಜಯದೇವ್ ಉನದ್ಕತ್, ಕೃಷ್ಣಪ್ಪ ಗೌತಮ್, ಡೇನಿಯಲ್ ಸಾಮ್ಸ್, ಪ್ರೇರಕ್ ಮಂಕಡ್, ಕರಣ್ ಶರ್ಮಾ, ಮನನ್ ವೋಹ್ರಾ, ಮಾರ್ಕ್ ವುಡ್, ಕ್ವಿಂಟನ್ ಡಿ ಕಾಕ್, ಸ್ವಪ್ನಿಲ್ ಸಿಂಗ್, ಯಶ್ ಠಾಕೂರ್,
ರೊಮಾರಿಯೋ ಶೆಫರ್ಡ್, ಮಯಾಂಕ್ ಯಾದವ್, ಯುದ್ವೀರ್ ಸಿಂಗ್ ಚರಕ್
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಮೋಹಿತ್ ಶರ್ಮಾ
ಬೆಂಚ್: ಜೋಶುವಾ ಲಿಟ್ಲ್, ಜಯಂತ್ ಯಾದವ್, ಶಿವಂ ಮಾವಿ, ರವಿಶ್ರೀನಿವಾಸನ್ ಸಾಯಿ ಕಿಶೋರ್, ಶ್ರೀಕರ್ ಭರತ್, ಸಾಯಿ ಸುದರ್ಶನ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ದಾಸುನ್ ಶಾನಕ, ಒಡೆಯನ್ ಸ್ಮಿತ್, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್, ಯಶ್ ದಯಾಳ್