LSG vs MI IPL 2024: ಹಾರ್ದಿಕ್ ಪಾಂಡ್ಯ ಬಳಗಕ್ಕೆ ಸೋಲುಣಿಸಿದ ಕೆಎಲ್ ರಾಹುಲ್ ಪಡೆ
ಮಂಗಳವಾರ, ಏಪ್ರಿಲ್ 30ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 48ನೇ ಪಂದ್ಯದಲ್ಲಿ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವು ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.
ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2024ರಲ್ಲಿ ಆಡಿದ 10 ಪಂದ್ಯಗಳಲ್ಲಿ 6 ಗೆಲುವು ಮತ್ತು 4 ಸೋಲುಗಳ ಮೂಲಕ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರೆ, ಇನ್ನು ಮುಂಬೈ ಇಂಡಿಯನ್ಸ್ ತಂಡ ತನ್ನ ಕಳಪೆ ಪ್ರದರ್ಶನ ಮುಂದುವರೆಸಿದ್ದು, ಆಡಿದ 10 ಪಂದ್ಯಗಳಲ್ಲಿ 3 ಗೆಲುವು ಮತ್ತು 7 ಸೋಲುಗಳ ಮೂಲಕ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಹಾಲ್ ವಧೇರಾ ಮತ್ತು ಟಿಮ್ ಡೇವಿಡ್ ಅವರ ಸಮಯೋಚಿತ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು.
145 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮಾರ್ಕಸ್ ಸ್ಟೋಯಿನಿಸ್ ಅವರ ಅಮೋಘ ಅರ್ಧಶತಕದ ಸಹಾಯದಿಂದ 19.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.
ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ಕೆಎಲ್ ರಾಹುಲ್ ಮತ್ತು ಅರ್ಶಿನ್ ಕುಲಕರ್ಣಿ ಉತ್ತಮ ಆರಂಭ ನೀಡಲು ವಿಫಲರಾದರು. ಏಕೆಂದರೆ, ಚೊಚ್ಚಲ ಐಪಿಎಲ್ ಪಂದ್ಯವಾಡಿದ ಅರ್ಶಿನ್ ಕುಲಕರ್ಣಿ ಸೊನ್ನೆಗೆ ಔಟಾದರು.
ನಂತರ ಜೊತೆಗೂಡಿದ ಕೆಎಲ್ ರಾಹುಲ್ ಮತ್ತು ಮಾರ್ಕಸ್ ಸ್ಟೋಯಿನಿಸ್ ತಂಡದ ಮೊತ್ತ ಹೆಚ್ಚಿಸಲು ಗಮನ ಹರಿಸಿದರು. ಈ ವೇಳೆ ಕೆಎಲ್ ರಾಹುಲ್ 22 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಆ ಬಳಿಕ ಬಂದ ದೀಪಕ್ ಹೂಡಾ 18 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 18 ರನ್ ಗಳಿಸಿದರೆ, ಮಾರ್ಕಸ್ ಸ್ಟೋಯಿನಿಸ್ 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 62 ರನ್ ಬಾರಿಸಿದರು.
ಉಳಿದಂತೆ ನಿಕೋಲಸ್ ಪೂರನ್ ಅಜೇಯ 14 ರನ್, ಆಶ್ಟನ್ ಟರ್ನರ್ 5 ರನ್, ಆಯುಷ್ ಬಡೋನಿ 6 ರನ್ ಮತ್ತು ಕೃನಾಲ್ ಪಾಂಡ್ಯ 1 ರನ್ ಗಳಿಸಿ ತಂಡವನ್ನು ಗೆಲ್ಲಿಸಲು ನೆರವಾದರು.
ಬೌಲಿಂಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ನಾಯಕ ಹಾರ್ದಿಕ್ ಪಾಂಡ್ಯ 4 ಓವರ್‌ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ನುವಾನ್ ತುಷಾರ, ಜೆರಾಲ್ಡ್ ಕೋಯಟ್ಜಿ ಮತ್ತು ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ಪರ ಬರ್ಥ್ ಡೇ ಬಾಯ್ ರೋಹಿತ್ ಶರ್ಮಾ 4 ರನ್ ಗಳಿಸಿ ಔಟಾದರೆ, ಸೂರ್ಯಕುಮಾರ್ ಯಾದವ್ 10 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬಂದ ತಿಲಕ್ ವರ್ಮಾ 7 ರನ್‌ಗಳಿಗೆ ಔಟಾದರು. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಸೊನ್ನೆ ಸುತ್ತಿ ತಮ್ಮ ಕಳಪೆ ಪ್ರದರ್ಶನ ಮುಂದುವರೆಸಿದರು.
ಆರಂಭಿಕ ಇಶಾನ್ ಕಿಶನ್ 36 ಎಸೆತಗಳಲ್ಲಿ 3 ಬೌಂಡರಿ ಮೂಲಕ 32 ರನ್ ಗಳಿಸಿದರೆ, ಕೊನೆಯಲ್ಲಿ ನೆಹಾಲ್ ವಧೇರಾ 41 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 46 ರನ್ ಬಾರಿಸಿದರು. ಟಿಮ್ ಡೇವಿಡ್ 18 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 35 ರನ್ ಗಳಿಸಿ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು.
ಇನ್ನು ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಮೊಹ್ಸಿನ್ ಖಾನ್ 4 ಓವರ್‌ಗಳಲ್ಲಿ 36 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಮಾರ್ಕಸ್ ಸ್ಟೋಯಿನಿಸ್, ನವೀನ್-ಉಲ್-ಹಕ್, ಮಯಾಂಕ್ ಯಾದವ್ ಮತ್ತು ರವಿ ಬಿಷ್ಣೋಯ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications