ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2025 ರ 13 ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಗಳ ಪಂದ್ಯವು ಏಪ್ರಿಲ್ 1 ರಂದು ಸಂಜೆ 7:30 ಗಂಟೆಗೆ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಐಪಿಎಲ್ 2025 ರಲ್ಲಿ ರಿಷಭ್ ಪಂತ್ ನೇತೃತ್ವದ ಲಕ್ನೋ ತಂಡಕ್ಕೆ ಇದು ಮೊದಲ ತವರಿನಲ್ಲಿ ಪಂದ್ಯವಾಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಗೆಲುವು ಸಾಧಿಸಿದೆರೆ, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಲಕ್ನೋ ಮಣಿಸಿದೆ. ಹೀಗಾಗಿ ಇಂದು ಲಕ್ನೋ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಗೆಲ್ಲುವುದು ಯಾರು ಎಂಬ ಕುತೂಹಲ ಮೂಡಿಸಿದೆ.
ಲಕ್ನೋ ತಂಡಕ್ಕೆ ಸ್ಪೋಟಕ ಬ್ಯಾಟಿಂಗ್ ಬಲವಾದರೆ, ಪಂಜಾಬ್ ತಂಡದ ಬಳಿ ವಿಭಿನ್ನ ಬೌಲಿಂಗ್ ಅಸ್ತ್ರಗಳಿವೆ. ಕಳೆದ ಮೂರು ಪಂದ್ಯಗಳಲ್ಲಿ ಲಕ್ನೋ ಪರ ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇನ್ನೂ ಆಡಿರುವ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿರುವ ಪಂಜಾಬ್ ತಂಡದ ಬೌಲರ್‍ಗಳಿಗೆ ಲಕ್ನೋ ಸ್ಫೋಟಕ ಬ್ಯಾಟಿಂಗ್ ಕಟ್ಟಿ ಹಾಕುವುದು ಸವಾಲಾಗಿದೆ.

ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಎರಡು ತಂಡಗಳಲ್ಲಿ ವಿಶ್ವದ ಕೆಲವು ಅತ್ಯುತ್ತಮ ಆಟಗಾರರಿದ್ದಾರೆ. ಲಕ್ನೋ ತಂಡದಲ್ಲಿ ರಿಷಭ್ ಪಂತ್, ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಶಾರ್ದೂಲ್ ಠಾಕೂರ್ ಮತ್ತು ಡೇವಿಡ್ ಮಿಲ್ಲರ್ ಅವರಂತಹ ಆಟಗಾರರಿದ್ದಾರೆ. ಮತ್ತೊಂದಡೆ ಪಂಜಾಬ್ ಬಳಗದಲ್ಲಿ ಯುಜ್ವೇಂದ್ರ ಚಹಾಲ್, ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರಂತಹ ಸ್ಫೋಟಕ ಅಟಗಾರರಿದ್ದಾರೆ. ಉಭಯ ತಂಡಗಳು ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಲ್ಲೂ ಬಲಿಷ್ಠವಾಗಿವೆ.
ರಿಷಭ್ ಪಂತ್ ಪಡೆ ಆಡಿರುವ ಮೂರು ಪಂದ್ಯಗಳಲ್ಲಿ 2 ರಲ್ಲಿ ಗೆದ್ದು, 1 ರಲ್ಲಿ ಸೋತು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇತ್ತ ಏಕೈಕ ಪಂದ್ಯವನ್ನು ಆಡಿ ಗೆದ್ದಿರುವ ಶ್ರೇಯಸ್ ಅಯ್ಯರ್ ಬಳಗ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಐಪಿಎಲ್ ಇತಿಹಾಸದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ತಂಡಗಳು ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿವೆ. ಲಕ್ನೋ ಸೂಪರ್ ಜೈಂಟ್ಸ್ 3 ರಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದರೆ, ಪಂಜಾಬ್ ಕಿಂಗ್ಸ್ 1 ರಲ್ಲಿ ಜಯ ಕಂಡಿದೆ. ಈಗ ಪಂಜಾಬ್ ಕಿಂಗ್ಸ್ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.
ಲಕ್ನೋ ಸೂಪರ್ ಜೈಂಟ್ಸ್: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್‌ಕೀಪರ್), ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಅವೇಶ್ ಖಾನ್, ಪ್ರಿನ್ಸ್ ಯಾದವ್.
ಪಂಜಾಬ್ ಕಿಂಗ್ಸ್: ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್‌ಕೀಪರ್), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಸೂರ್ಯಾಂಶ್ ಶೆಡ್ಜ್, ಅಜ್ಮತುಲ್ಲಾ ಒಮರ್ಜಾಯ್, ಮಾರ್ಕೊ ಜಾನ್ಸೆನ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್.