ಐಪಿಎಲ್‌ನ ಅತ್ಯಂತ್ರ ಹೆಸರುವಾಸಿ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದ.. ಇನ್ನುವರೆಗೂ ಆರ್‌ಸಿಬಿ ತಂಡ ಒಮ್ಮೆಯೂ ಐಪಿಎಲ್ ಟ್ರೋಫಿ ಗೆಲ್ಲದಿದ್ದರೂ, ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ಈ ತಂಡ ಅದೆಷ್ಟೋ ಸ್ಟಾರ್ ಆಟಗಾರರನ್ನು ಹುಡುಕಿ ಪೋಷಿಸಿದೆ.
ಆರ್‌ಸಿಬಿ ತಂಡದ ಮೂಲಕವೇ ವಿಶ್ವ ಕ್ರಿಕೆಟ್‌ಗೆ ಪರಿಚಯವಾದ ಹಲವು ಆಟಗಾರರು ಇದ್ದಾರೆ. ಈ ತಂಡ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದ್ದರೂ, ಈ ತಂಡ ಲಕ್ಕಿ ತಂಡ ಎಂದು ಪ್ಲೇಯರ್ಸ್ ನಂಬಿದ್ದಾರೆ. ಒಮ್ಮೆಯಾದರೂ ಈ ತಂಡದ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಿಕೊಳ್ಳುವ ಅವಕಾಶ ಸಿಕ್ಕರೆ ಸಾಕು ಎನ್ನುವ ಮನೋಭಾವ ಹೊಂದಿರುವ ಆಟಗಾರರು ಇದ್ದಾರೆ.

ಆರ್‌ಸಿಬಿ ನಿಜಕ್ಕೂ ಆಟಗಾರರಿಗೆ ರಾಯಲ್ ಟ್ರಿಟ್ಮೆಂಟ್ ನೀಡುತ್ತದೆ. ಈ ತಂಡದಲ್ಲಿ ಸ್ಥಾನ ಪಡೆದರೆ, ಮೋಜು, ಮಸ್ತಿ, ಹಣದ ಜೊತೆಗೆ ಕ್ರಿಕೆಟ್ ಭಾಷೆಯನ್ನು ಸಹ ಸುಧಾರಿಸಿಕೊಳ್ಳಬಹುದು. ಈ ತಂಡ ಮೊದಲಿನಿಂದಲೂ ಉತ್ತಮ ಸಹಾಯಕ ಸಿಬ್ಬಂದಿ ಹಾಗೂ ಕೋಚ್‌ಗಳನ್ನು ಹೊಂದಿದ್ದು, ಉತ್ತಮ ಆಟಗಾರರಿಗೆ ವೇದಿಕೆ ನೀಡುತ್ತಲೆ ಬಂದಿದೆ.
ಐಪಿಎಲ್‌ನ ಈ ಫ್ರಾಂಚೈಸಿ ನಿಜಕ್ಕೂ ಆಟಗಾರರ ಪಾಲಿಗೆ ಲಕ್ ತರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ಈ ತಂಡದಲ್ಲಿ ಆಡಿ ಮಿಂಚಿದ ಮೂಲಕವೇ ಅದೆಷ್ಟೋ ಆಟಗಾರರು ರಾಷ್ಟ್ರೀಯ ತಂಡದ ಜೆರ್ಸಿ ತೊಟ್ಟು ತಮ್ಮ ಕನಸನ್ನು ಸಾಕಾರ ಗೊಳಿಸಿಕೊಂಡಿದ್ದಾರೆ. ಈ ಆಟಗಾರರಿಗೆ ತಮ್ಮ ಕನಸಿನ ಕುದುರೆಯ ಮೇಲೆ ಪ್ರಯಾಣ ಬೆಳೆಸುವ ಶಕ್ತಿಯನ್ನು ಸಹ ಆರ್‌ಸಿಬಿ ಎನ್ನುವ ಫ್ರಾಂಚೈಸಿ ನೀಡಿದೆ.
ಆರ್‌ಸಿಬಿ ತಂಡ ಅಗಷ್ಟೇ ಅಂಡರ್ 19 ವಿಶ್ವಕಪ್ ಗೆದ್ದುಕೊಂಡು ಬಂದಿದ್ದ ಟೀಮ್ ಇಂಡಿಯಾದ ಯುವ ತಂಡದ ಮುಂದಾಳು ವಿರಾಟ್ ಕೊಹ್ಲಿಗೆ ತಂಡದಲ್ಲಿ ಸ್ಥಾನ ನೀಡುತ್ತದೆ. ಅಲ್ಲದೆ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಎಪ್ರಿಲ್ 18, 2008ರಲ್ಲಿ ಆಡುವ ಅವಕಾಶವನ್ನು ಕಲ್ಪಿಸಿ ಕೊಡುತ್ತದೆ. ಇದಾದ ಕೆಲವೇ ತಿಂಗಳುಗಳಲ್ಲಿ ವಿರಾಟ್ ಬ್ಲ್ಯೂ ಜೆರ್ಸಿಯನ್ನು ತೊಡುತ್ತಾರೆ. ಇಲ್ಲಿಂದ ವಿರಾಟ್ ಹಿಂದಿರುಗಿ ನೋಡಿದ್ದೇ ಇಲ್ಲ. ವಿರಾಟ್ ಕೊಹ್ಲಿ ಈಗ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಹೊಂದಿರುವ ಆಟಗಾರ. ವಿರಾಟ್ ಬೆಳವಣಿಗೆಯಲ್ಲಿ ಆರ್‌ಸಿಬಿ ಪಾತ್ರ ಬಹಳ ಮುಖ್ಯ.

ನೀವು ಇಂತಹ ಆಟಗಾರರ ಪಟ್ಟಿಯನ್ನು ತೆಗೆದು ನೋಡುತ್ತಾ ಹೋದರೆ, ನಿಲ್ಲುವುದೇ ಇಲ್ಲ.. ಈ ಪಟ್ಟಿ ಬೆಳೆಯುತ್ತಲೆ ಸಾಗುತ್ತದೆ. ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದೇ ಕರಿಸಿಕೊಳ್ಳುವ ಕೆ.ಎಲ್ ರಾಹುಲ್ ಸಹ ಈ ಡ್ರೆಸ್ಸಿಂಗ್ ರೂಮ್‌ಗೆ ಎಂಟ್ರಿ ನೀಡದ ಮೇಲೆ ಟೀಮ್ ಇಂಡಿಯಾದ ಬಾಗಿಲು ತೆರೆಯಿತು. ಅಂದಹಾಗೆ ಬರೀ ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದರೆ ಸಾಕಾಗುವುದಿಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಸ್ಥಿರ ಪ್ರದರ್ಶನ ನೀಡಿದಲ್ಲಿ ಮಾತ್ರ ಅವಕಾಶದ ಬಾಗಿಲುಗಳು ತೆರೆಯುತ್ತಾ ಸಾಗುತ್ತವೆ.
ಇನ್ನು ಆರ್‌ಸಿಬಿ ತಂಡದ ಪರ ಆಡಿ ಸೈ ಎನಿಸಿಕೊಂಡ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್, ಹರ್ಷಲ್ ಪಟೇಲ್, ಮನೀಷ್ ಪಾಂಡೆ, ವಿನಯ್ ಕುಮಾರ್, ಶಿವಂ ದುಬೆ ಇಷ್ಟೇ ಏಕೆ ಈಗ ಮೂರು ಫಾರ್ಮೆಟ್‌ಗಳಲ್ಲಿ ತನ್ನ ಸ್ಥಿರ ಪ್ರದರ್ಶನ ನೀಡಿ ವಿಶ್ವದ ಬೆಸ್ಟ್ ಬೌಲರ್‌ಗಳಲ್ಲಿ ಒಬ್ಬರು ಎಂದು ಕರೆಸಿಕೊಳ್ಳುವ ಮೊಹಮ್ಮದ್ ಸಿರಾಜ್ ಸಹ ಈ ತಡದಿಂದಲೇ ಬೆಳಕಿಗೆ ಬಂದ ಪ್ರತಿಭೆ.. ಹೀಗಾಗಿ ಒಮ್ಮೆಯಾದರೂ ಆರ್‌ಸಿಬಿ ಜೆರ್ಸಿ ತೊಡಬೇಕು ಎಂಬ ಭಾವನೆ ಯಂಗ್ ಪ್ಲೇಯರ್‌ಗಳದ್ದಾಗಿರುತ್ತದೆ.

ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದ ಕರ್ನಾಟಕದ ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ ಸಹ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದಾರೆ. ಅಲ್ಲದೆ ಅಬ್ಬರದ ಪ್ರದರ್ಶನ ನೀಡಿದ ಬಳಿಕವೇ ಇವರಿಗೆ ರಾಷ್ಟ್ರೀಯ ಟಿ20 ತಂಡದಲ್ಲಿ ಸ್ಥಾನ ಲಭಿಸಿತು. ಈಗ ರಜತ್ ಪಟೀದಾರ ಸರದಿ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದ ಆಟಗಾರ. ಭಾರತ ಎ ತಂಡದ ಪರ ಹಾಗೂ ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಫಲವೇ ಈಗ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರಜತ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು ಟೀಮ್ ಇಂಡಿಯಾ ಜಯದಲ್ಲಿ ಮಿಂಚಲಿ ಎಂಬುದೇ ಆರ್‌ಸಿಬಿ ಅಭಿಮಾನಿಗಳ ಆಶಯ. ಅಷ್ಟೇ ಅಲ್ಲ ಮಾರ್ಚ್‌ನಲ್ಲಿ ಆರಂಭವಾಗಲಿರುವ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಮನಮೋಹಕ ಪ್ರದರ್ಶನ ನೀಡುವ ಮೂಲಕ, ಇಷ್ಟು ವರ್ಷ ಮಾಯಾ ಜಿಂಕೆಯಂತೆ ಕಾಡಿದ ಕಪ್‌ನ್ನು ಎತ್ತಿ ಹಿಡಿಯಲಿ ಎಂಬುದೇ ಕೋಟ್ಯಾಂತರ ಅಭಿಮಾನಿಗ ಬಯಕೆ.