ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರ ಚೇತೇಶ್ವರ್ ಪೂಜಾರ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಅಭಿಮಾನಿಗಳಿಗೆ ಬೇಸರ ತರಿಸಿದೆ. ಪೂಜಾರ ವರ್ಷಗಳಿಂದ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದರು. ಆದರೆ ಆ ಆಸೆ ಫಲಿಸಲಿಲ್ಲ. ಇವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಹಲವು ಮಾಜಿ ಆಟಗಾರರು ಇವರ ಆಟವನ್ನು ಹಾಡಿ ಹೊಗಳಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಈ ಸಾಲಿಗೆ ಸೇರಿಕೊಂಡಿದ್ದಾರೆ.
ಟೀಮ್ ಇಂಡಿಯಾಕ್ಕೆ ಚೇತೇಶ್ವರ್ ಪೂಜಾರ ಅವರು ನೀಡಿದ ಸೇವೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ವೇಳೆ ಮೋದಿ 2018 ಮತ್ತು 2021 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವುಗಳನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಕಠಿಣ ಪರಿಸ್ಥಿತಿಗಳಲ್ಲಿ ತಂಡಕ್ಕೆ ಅಗತ್ಯ ಕಾಣಿಕೆ ನೀಡುತ್ತಿದ್ದ ಪೂಜಾರ ಅವರ ಕ್ಷಮತೆಯನ್ನು ಪ್ರಧಾನಿ ಕೊಂಡಾಡಿದ್ದಾರೆ.

ಪೂಜಾರ ಅವರ ಹಲವು ಸ್ಮರಣೀಯ ಇನಿಂಗ್ಸ್‌ಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯ ಅಭಿಮಾನಿಗಳ ಮನಸ್ಸಿನಲ್ಲಿ ಯಾವಾಗಲು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಮೋದಿ ಬರೆದುಕೊಂಡಿದ್ದಾರೆ. ಈ ಸರಣಿಯಲ್ಲಿ ಪೂಜಾರ ತಮ್ಮ ರಕ್ಷಣಾ ಆಟದಿಂದ ಭಾರತದ ಐತಿಹಾಸಿಕ ಗೆಲುವಿಗೆ ಅಡಿಪಾಯ ಹಾಕಿದರು. ದೇಶೀಯ ಕ್ರಿಕೆಟ್‌ಗೆ ಪೂಜಾರ ಅವರ ಸಮರ್ಪಣೆಯನ್ನು ಮೋದಿ ಶ್ಲಾಘಿಸಿದ್ದಾರೆ.
ಚೇತೇಶ್ವರ್ ಪೂಜಾರ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರನಾದ್ರೂ ಸಹ ಸೌರಾಷ್ಟ್ರ ಪರ ಹಾಗೂ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಆದ್ಯತೆ ನೀಡುತ್ತಿದ್ದರು ಎಂದು ಮೋದಿ ತಿಳಿಸಿದ್ದಾರೆ. ಪೂಜಾರ ಅವರ ಈ ನಿಲುವ ಆಟದ ಬಗ್ಗೆ ಅವರಲ್ಲಿನ ಉತ್ಸಾಹ ಹಾಗೂ ಬದ್ಧತೆಯನ್ನು ತೋರಿಸುತ್ತದೆ. ಸೌರಾಷ್ಟ್ರ ಕ್ರಿಕೆಟ್ ಜೊತೆಗೆ ಚೇತೇಶ್ವರ್ ಉತ್ತಮ ಸಂಬಂಧ ಹೊಂದಿದ್ದರು. ಕ್ರಿಕೆಟ್ ನಕ್ಷೆಯಲ್ಲಿ ರಾಜ್‌ಕೋಟ್ ತಂಡ ಎದ್ದು ಕಾಣುವಂತೆ ಮಾಡಲು ಇವರ ಕೊಡಗೆ ಅಪಾರವಾಗಿದೆ ಎಂದು ಪ್ರಧಾನಿ ಬರೆದಿದ್ದಾರೆ.
37 ವರ್ಷದ ಪೂಜಾರ, ಭಾರತದ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಈ ವೇಳೆ 43ರ ಸರಾಸರಿಯಲ್ಲಿ 7195 ರನ್ ಕಲೆ ಹಾಕಿದ್ದಾರೆ. ಈ ವೇಳೆ 19 ಶತಕ ಹಾಗೂ 35 ಅರ್ಧಶತಕಗಳು ಸಹ ಸೇರಿವೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪೂಜಾರ 278 ಪಂದ್ಯಗಳಲ್ಲಿ 21301 ರನ್ ಸಿಡಿಸಿದ್ದಾರೆ. ಇದರಲ್ಲಿ 66 ಶತಕ ಹಾಗೂ 81 ಅರ್ಧಶತಕಗಳು ಸೇರಿವೆ. ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ನಿವೃತ್ತರಾದ ಬಳಿಕ ತೆರವಾದ ಸ್ಥಾನವನ್ನು ಚೇತೇಶ್ವರ್ ಪೂಜಾರ ತುಂಬಿದ್ದರು. ಚೇತೇಶ್ವರ್ ಇಲ್ಲದೇ ಮೂರನೇ ಸ್ಥಾನ ಈಗ ಬಿಕೋ ಅನ್ನುತ್ತಿದೆ. ಈ ಸ್ಥಾನಕ್ಕೆ ಇನ್ನು ಸೂಕ್ತ ಆಟಗಾರ ಸಿಕ್ಕಿಲ್ಲ. ಟೀಮ್ ಇಂಡಿಯಾ ಇದಕ್ಕಾಗಿ ಹುಡುಕಾಟ ನಡೆಸುತ್ತಲೇ ಇದೆ.